ನವರಾತ್ರಿಯಲ್ಲಿ ಆರನೇ ಅವತಾರವೇ ಕಾತ್ಯಾಯನಿ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿ ದೇವಿಯನ್ನು ಷಷ್ಠಿಯಂದು ಅಂದರೆ ನವರಾತ್ರಿಯ 6ನೇ ದಿನ ಪೂಜಿಸಲಾಗುತ್ತದೆ.
ಕಾತ್ಯಾಯಿನಿ ದೇವಿ ಕಥೆ ಭಾಗವತ, ಮಾರ್ಕಂಡೇಯ, ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವೇ ಮಹಿಷಾಸುರನ ಸಂಹಾರ ಮಾಡುವುದಾಗಿತ್ತು.
ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.
ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ಕೆಟ್ಟದರ ಮೇಲೆ ಒಳ್ಳೆಯದರ ವಿಜಯ ಎಂದು ಗುರುತಿಸಲಾಗಿದೆ.
ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.
ಕಾತ್ಯಾಯಿನಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಅಪಾರ ಸುಖ, ಸಮೃದ್ಧಿ, ಯಶಸ್ಸು ಸಿಗಲಿದೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.
ಮಹಿಳೆಯರು ಹಸಿರು ವಸ್ತ್ರ ಧರಿಸಿ ದೇವಿಯನ್ನು ಪೂಜಿಸಬೇಕು. ಶುದ್ಧವಾದ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಿ ಸಂಪತ್ತು, ಆರ್ಥಿಕ ಅಭಿವೃದ್ಧಿ ದಯಪಾಲಿಸುವಂತೆ ಭಕ್ತಿಯಿಂದ ಬೇಡಿಕೊಳ್ಳಬೇಕು.
ಕಾತ್ಯಾಯಿನಿ ದೇವಿಗೆ ಕೆಂಪು ಗುಲಾಬಿಯು ಹೆಚ್ಚು ಶ್ರೇಷ್ಠವಾದದ್ದು. ದೇವಿಯ ಪೂಜೆ ಕೈಗೊಳ್ಳುವ ಮೊದಲು ಗಣೇಶನ ಪ್ರಾರ್ಥನೆ ಮಾಡಬೇಕು. ದೇವಿಗೆ ಷೋಡಶೋಪಚಾರ ಅರ್ಪಿಸಿದ ನಂತರ ಮಂಗಳಾರತಿಯ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಲಾಗುವುದು.
ಕಷ್ಟ ಬಂದಾಗ, ನಷ್ಟ ಆದಾಗ, ದುಃಖದಲ್ಲಿದ್ದಾಗ ದೇವರಿಗೆ ಮೊರೆ ಇಡುವಷ್ಟು ಏಕಾತ್ಮ ಭಾವದಿಂದ ಸುಖ, ಸಂತೋಷದಲ್ಲೂ ನಾವು ದೇವರಿಗೆ ಸ್ಮರಿಸಿದರೆ ಅದಕ್ಕಿಂತ ಮತ್ಯಾವ ಸಾಧನೆಯೂ ಬೇಕಿಲ್ಲ.
ಚಂದ್ರಹಾಸೋಜ್ವಲಕರಾ
ಶಾರ್ದೂಲ ವರ ವಾಹನಾ
ಕಾತ್ಯಾಯನಿ ಶುಭಂ ದದ್ಯಾ
ದೇವಿ ದಾನವ ಘಾತಿನಿ ॥

ವೀಣಾ ಹೇಮಂತ್‌ಗೌಡ ಪಾಟೀಲ್
ಮುಂಡರಗಿ, ಗದಗ.








