- ವಿಂಡೀಸ್ ವಿರುದ್ಧ 2-0 ಸರಣಿ ಕ್ಲೀನ್ ಸ್ವೀಪ್
- ಗಿಲ್ ನಾಯಕತ್ವದಲ್ಲಿ ಮೊದಲ ಗೆಲುವು
ನವದೆಹಲಿ: ಕೆ.ಎಲ್. ರಾಹುಲ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಈ ಜಯವು ನಾಯಕ ಶುಭಮನ್ ಗಿಲ್ ಅವರ ನೇತೃತ್ವದಲ್ಲಿ ತಂಡದ ಮೊದಲ ಟೆಸ್ಟ್ ಸರಣಿ ಗೆಲುವು ಎಂಬ ವಿಶೇಷತೆಯನ್ನು ಕೂಡ ಹೊಂದಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ, ವಿಂಡೀಸ್ ತಂಡ ಭಾರತಕ್ಕೆ ತೀವ್ರ ಪ್ರತಿಸ್ಪರ್ಧೆ ನೀಡುವಲ್ಲಿ ವಿಫಲವಾಯಿತು. 58 ರನ್ ಹಿನ್ನಡೆಯೊಂದಿಗೆ ಕೊನೆಯ ದಿನದ ಕ್ರೀಸ್ ಪ್ರವೇಶಿಸಿದ ಭಾರತ, ಮೊದಲಿನ ಎರಡು ವಿಕೆಟ್ ಕಳೆದುಕೊಂಡರೂ ಕೆಎಲ್ ರಾಹುಲ್ ಅವರ ಶಾಂತ ಮತ್ತು ದೃಢ ಬ್ಯಾಟಿಂಗ್ ತಂಡವನ್ನು ಜಯದ ದಡ ಸೇರಿಸಿತು.
108 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 58 ರನ್‌ಗಳ ಅಜೇಯ ಇನಿಂಗ್ಸ್ ಆಡಿದ ರಾಹುಲ್, ಜಯದ ನಾಂದಿಯನ್ನು ಹಾಡಿದರು. ಅವರ ಜೊತೆಗೆ ಸಾಯಿ ಸುದರ್ಶನ್ 76 ಎಸೆತಗಳಲ್ಲಿ 39 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ನಾಯಕ ಶುಭಮನ್ ಗಿಲ್ 13 ರನ್ ಮಾಡಿ ಔಟಾದರೆ, ಧ್ರುವ್ ಜುರೆಲ್ 6 ರನ್‌ಗಳೊಂದಿಗೆ ಅಜೇಯರಾಗಿದ್ದರು. ವಿಂಡೀಸ್ ಪರ ರೋಸ್ಟನ್ ಚೇಸ್ 2 ವಿಕೆಟ್ ಹಾಗೂ ಜೋಮೆಲ್ ವಾರಿಕನ್ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು 518/5ರಲ್ಲಿ ಡಿಕ್ಲೇರ್ ಮಾಡಿತ್ತು. ಪ್ರತಿಯಾಗಿ ವಿಂಡೀಸ್ ಕೇವಲ 248 ರನ್ ಗಳಿಸಿ ಆಲೌಟ್ ಆಯಿತು. 270 ರನ್‌ಗಳ ಭರ್ಜರಿ ಮುನ್ನಡೆ ಪಡೆದ ಭಾರತ ಫಾಲೋ-ಆನ್ ಹೇರಿತು. ವಿಂಡೀಸ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಧೀರ ಹೋರಾಟ ನೀಡಿ 390 ರನ್ ಗಳಿಸಿದರೂ, ಭಾರತಕ್ಕೆ ಕೇವಲ 120 ರನ್ ಗುರಿಯಿತ್ತು.
ನಾಲ್ಕನೇ ದಿನದ ಅಂತ್ಯಕ್ಕೆ ಭಾರತ 1 ವಿಕೆಟ್‌ಗೆ 63 ರನ್ ಗಳಿಸಿದ್ದರೂ, ಐದನೇ ದಿನ ಮೊದಲ ಅವಧಿಯಲ್ಲೇ ಅಗತ್ಯ ರನ್ ಗಳಿಸಿ ಜಯ ಸಾಧಿಸಿತು.ಇದನ್ನು ಓದಿ –ನಕಲಿ BPO ಕಂಪನಿ ಮೂಲಕ ವಂಚನೆ – 16 ಮಂದಿ ಬಂಧನ
ಸಂಕ್ಷಿಪ್ತ ಸ್ಕೋರ್:
ಭಾರತ ಪ್ರಥಮ ಇನ್ನಿಂಗ್ಸ್ – 518/5 ಡಿಕ್ಲೇರ್
ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ – 248 ಆಲೌಟ್
ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್ – 390 ಆಲೌಟ್
ಭಾರತ ದ್ವಿತೀಯ ಇನ್ನಿಂಗ್ಸ್ – 124/3
ಭಾರತವು ನಾಲ್ಕು ದಿನಗಳೊಳಗೆ ಪಂದ್ಯವನ್ನು ಮುಗಿಸಿ ಸರಣಿಯನ್ನೇ ತನ್ನದಾಗಿಸಿಕೊಂಡಿದೆ.








