- ಸಚಿವ ಸಂಪುಟದ ತಾತ್ವಿಕ ಅನುಮೋದನೆ
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕದಲ್ಲಿ ಮತ್ತೊಂದು ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ದಾರಿ ತೆರೆಯಲಾಗಿದೆ. ಬೆಂಗಳೂರಿನ ಆನೇಕಲ್ ತಾಲ್ಲೂಕಿನಲ್ಲಿ ₹2,350 ಕೋಟಿ ರೂ. ಅಂದಾಜು ವೆಚ್ಚದಲ್ಲಿ 80,000 ಆಸನ ಸಾಮರ್ಥ್ಯದ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ.
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಘಟನೆ ಬಳಿಕ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ, ಇಂಡ್ಲವಾಡಿ ಗ್ರಾಮದ ಸೂರ್ಯನಗರ ನಾಲ್ಕನೇ ಹಂತದ ವಿಸ್ತರಣೆಯ 75 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ವಸತಿ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ವಿವರವಾದ ಯೋಜನಾ ವರದಿ ಮತ್ತು ಕಾರ್ಯಸಾಧ್ಯತಾ ಅಧ್ಯಯನವನ್ನು ಸಿದ್ಧಪಡಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು, “ಈ ಕ್ರೀಡಾಂಗಣವು 80,000 ಆಸನ ಸಾಮರ್ಥ್ಯ ಹೊಂದಿದ್ದು, 24 ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಜೊತೆಗೆ, 3,000 ಆಸನಗಳ ಸಭಾಂಗಣವನ್ನೂ ನಿರ್ಮಿಸಲಾಗುವುದು. ಇದು ದೇಶದ ಅತಿದೊಡ್ಡ ಕ್ರೀಡಾ ಸಂಕೀರ್ಣಗಳಲ್ಲಿ ಒಂದಾಗಲಿದೆ” ಎಂದು ಹೇಳಿದರು.
ಈ ಕ್ರೀಡಾಂಗಣವು ಮೈಸೂರು ಮತ್ತು ತುಮಕೂರು ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣಗಳ ನಂತರ ರಾಜ್ಯದ ಮೂರನೇ ಅಂತರರಾಷ್ಟ್ರೀಯ ಕ್ರೀಡಾಂಗಣವಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ದುರ್ಘಟನೆ ನಂತರದ ಕ್ರಮ:
ಬೆಂಗಳೂರು ನಗರದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಪ್ರಸ್ತುತ ಕೇವಲ 38,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಣ್ಣ ನಗರಗಳೇ ಹೆಚ್ಚು ಸಾಮರ್ಥ್ಯದ ಕ್ರೀಡಾಂಗಣಗಳನ್ನು ಹೊಂದಿರುವುದರಿಂದ, ಬೆಂಗಳೂರಿನ ಕ್ರೀಡಾ ಮೂಲಸೌಕರ್ಯ ಕುರಿತು ಚರ್ಚೆಗಳು ನಡೆದಿದ್ದವು.
ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ನಂತರ ನಡೆದ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರಿಂದ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳು ಬಳಿಕ ನಡೆದಿಲ್ಲ.ಇದನ್ನು ಓದಿ –ಸರ್ಕಾರದ ಸಮಾರಂಭಗಳಲ್ಲಿ ಜನಪ್ರತಿನಿಧಿಗಳ ಆಹ್ವಾನಕ್ಕೆ ಹೊಸ ನಿಯಮ
ಈ ಹಿನ್ನೆಲೆಯಲ್ಲಿ, ಆನೇಕಲ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಕ್ರೀಡಾಂಗಣವು ರಾಜ್ಯದ ಕ್ರೀಡಾ ಪರಂಪರೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸುವ ನಿರೀಕ್ಷೆಯಿದೆ.








