ಬೆಂಗಳೂರು: ಕೋರ್ಟ್ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ 46ನೇ ಸಿಸಿಎಚ್ ಕೋರ್ಟ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಲತಾ ಅವರು ಕ್ರಿಮಿನಲ್ ಕೇಸೊಂದರ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು.
ಮೂರುಮೂರು ಸಲ ಕೇಸ್ ಮುಂದೂಡಿಕೆಯಾದ ನಂತರ, ಆರೋಪಿಯ ಪರ ವಾದಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು ₹1,100 ಲಂಚ ಕೇಳಿದರೆಂಬ ಆರೋಪ ಲತಾ ವಿರುದ್ಧ ಕೇಳಿಬಂದಿತ್ತು.
ದೂರುದಾರ ಎಂ. ರಾಜಾರಾಮ್ ನೀಡಿದ ಮಾಹಿತಿಯ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲತಾ ಅವರು ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ಲತಾ ಅವರ ವಿರುದ್ಧ ಪ್ರಕರಣ ದಾಖಲಾಗಿ, ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.








