- : 1 ಲಕ್ಷ ದಂಡ, 10 ವರ್ಷ ಜೈಲು
ಬೆಳಗಾವಿ: ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ನಿಯಂತ್ರಿಸಲು ಉದ್ದೇಶಿಸಿದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025 ಅನ್ನು ಬುಧವಾರ ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಂಡಿಸಿದರು. ಪ್ರಶ್ನೋತ್ತರ ಕಲಾಪದ ನಂತರ ಮಂಡನೆಯಾದ ಈ ಮಸೂದೆಗೆ ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.
ಈ ಮಸೂದೆ ಡಿಸೆಂಬರ್ 4ರಂದು ಸಚಿವ ಸಂಪುಟದಲ್ಲಿ ಅಂಗೀಕಾರಗೊಂಡಿದ್ದು, ದ್ವೇಷ ಭಾಷಣ ಮಾಡಿದ್ದಕ್ಕೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸುವ ಅವಕಾಶ ಇದರಲ್ಲಿದೆ. ಮೊದಲ ಬಾರಿಗೆ ತಪ್ಪಿತಸ್ಥರಾಗುವವರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಮತ್ತು 50,000 ರೂ. ದಂಡ ವಿಧಿಸಬಹುದು. ಅಪರಾಧ ಪುನರಾವರ್ತನೆಗೊಳಗಾದರೆ ಶಿಸ್ತು ಕ್ರಮ ಮತ್ತಷ್ಟು ಗಂಭೀರವಾಗಿ ಜಾರಿಯಾಗಲಿದೆ.
ಗೃಹ ಸಚಿವರು ಮಸೂದೆ ಮಂಡಿಸಲು ಅನುಮತಿ ಕೇಳಿದಾಗ, ಸ್ಪೀಕರ್ ಯು.ಟಿ. ಖಾದರ್ ಧ್ವನಿ ಮತಕ್ಕೆ ಹಾಕಿದರು. ಅದಕ್ಕೆ ಬಿಜೆಪಿ ಸದಸ್ಯರು “ಬೇಡ” ಎಂದು ಕೂಗುತ್ತಾ ತೀವ್ರ ವಿರೋಧ ತೋರಿಸಿದರು. ಸಂಸದ ಸುನಿಲ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಮತವಿಭಜನೆಯನ್ನು ಕೋರುತ್ತಾ ವಿರೋಧ ವ್ಯಕ್ತಪಡಿಸಿದರೂ, ಸ್ಪೀಕರ್ ಮಸೂದೆ ಮಂಡನೆಯ ಪ್ರಕ್ರಿಯೆಯನ್ನು ಮುಂದುವರಿಸಿದರು.
ವಿಧೇಯಕದ ಪ್ರಕಾರ, ಜೀವಂತ ಅಥವಾ ಸತ್ತ ವ್ಯಕ್ತಿ, ಗುಂಪು, ಸಮುದಾಯ ಅಥವಾ ಹಿತಾಸಕ್ತಿಯನ್ನು ಗುರಿಯಾಗಿಸಿಕೊಂಡು ದ್ವೇಷ, ವೈಷಮ್ಯ ಅಥವಾ ದ್ವೇಷಭಾವನೆ ಹುಟ್ಟಿಸುವ ಉದ್ದೇಶದಿಂದ ಮಾಡಿದ ಯಾವುದೇ ಮಾತು, ಬರಹ, ಪ್ರಕಟನೆ, ಪ್ರಚಾರವನ್ನು “ದ್ವೇಷ ಭಾಷಣ” ಎಂದು ಪರಿಗಣಿಸಲಾಗುತ್ತದೆ. ಧರ್ಮ, ಜನಾಂಗ, ಜಾತಿ, ಭಾಷೆ, ಲಿಂಗ, ಲೈಂಗಿಕ ಅಭಿರುಚಿ, ಅಂಗವೈಕಲ್ಯ, ಬುಡಕಟ್ಟು, ಜನ್ಮಸ್ಥಳ, ವಾಸಸ್ಥಳ ಇತ್ಯಾದಿ ಆಧಾರಿತ ಪೂರ್ವಾಗ್ರಹಗಳು ದ್ವೇಷ ಭಾಷಣಕ್ಕೆ ಒಳಪಡುವುವು.
ದ್ವೇಷ ಭಾಷಣ ಪ್ರಕರಣಗಳು ಜಾಮೀನುರಹಿತ ಅಪರಾಧಗಳ ಪಟ್ಟಿಗೆ ಸೇರಲಿದ್ದು, ಇದರ ವಿಚಾರಣೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರಿಂದ ನಡೆಯಲಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಸಮಾನ ಅಥವಾ ಹೆಚ್ಚಿನ ಹುದ್ದೆಯ ಪೊಲೀಸರಿಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.ಇದನ್ನು ಓದಿ –ಭೂ ಪರಿವರ್ತನೆ ನಿಯಮ ಗಳ ಸರಳಿಕರಣ: ಸಚಿವ ಕೃಷ್ಣ ಬೈರೇಗೌಡ
ರಾಜ್ಯದಲ್ಲಿ ಸಾಮಾಜಿಕ ಸಮರಸ್ಯ ಕಾಯ್ದುಕೊಳ್ಳಲು ಹಾಗೂ ದ್ವೇಷ ಪ್ರಚಾರಕ್ಕೆ ಕಡಿವಾಣ ಹಾಕಲು ಈ ಮಸೂದೆ ಮಹತ್ವದ್ದೆಂದು ಸರ್ಕಾರ ತಿಳಿಸಿದೆ. ಬಿಜೆಪಿ ಇದನ್ನು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತದ್ದು ಎಂದು ಟೀಕಿಸಿದೆ.








