- ಮೃತರ ಬೋನ್ ಸ್ಯಾಂಪಲ್ ಸಂಗ್ರಹ
ಚಿತ್ರದುರ್ಗ: ಹಿರಿಯೂರು ಸಮೀಪ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಆರು ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ, ಐದು ಮೃತದೇಹಗಳ ಮೂಳೆ (ಬೋನ್) ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಡಿಎನ್‌ಎ ವರದಿ ಬಂದ ಬಳಿಕ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಕ್ರಿಸ್ಮಸ್ ರಜೆ ಆಚರಿಸಲು ಬೆಂಗಳೂರಿನಿಂದ ಗೋಕರ್ಣಕ್ಕೆ ಸೀಬರ್ಡ್ ಬಸ್‌ನಲ್ಲಿ ಹೊರಟಿದ್ದ 33 ಪ್ರಯಾಣಿಕರ ಪೈಕಿ ಆರು ಮಂದಿ, ಜೊತೆಗೆ ಲಾರಿ ಚಾಲಕ ಕೂಡ ಅಪಘಾತದಲ್ಲಿ ಸಜೀವ ದಹನಗೊಂಡಿದ್ದಾರೆ. ವಿರುದ್ಧ ದಿಕ್ಕಿನಿಂದ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿದೆ.
ಅಪಘಾತದ ವೇಳೆ ನಿದ್ರೆಯಲ್ಲಿದ್ದ ಕಾರವಾರದ ರಶ್ಮಿ, ಚನ್ನರಾಯಪಟ್ಟಣದ ನವ್ಯ, ಮಾನಸಾ, ಬೆಂಗಳೂರಿನ ಬಿಂದು ಹಾಗೂ ಅವರ ಪುತ್ರಿ ಗ್ರಿಯಾ ಸೇರಿದಂತೆ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಮೃತದೇಹಗಳು ಗುರುತು ಸಿಗದ ಮಟ್ಟಿಗೆ ಸುಟ್ಟು ಕರಕಲಾಗಿದ್ದರಿಂದ, ಶವಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತರ ಗುರುತು ಖಚಿತಪಡಿಸಿಕೊಳ್ಳುವ ಸಲುವಾಗಿ, ಕುಟುಂಬಸ್ಥರ ರಕ್ತದ ಮಾದರಿಗಳನ್ನೂ ಸಂಗ್ರಹಿಸಲಾಗಿದೆ. ಜೊತೆಗೆ ಬೋನ್ ಸ್ಯಾಂಪಲ್‌ಗಳನ್ನು ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಡಿಎನ್‌ಎ ವರದಿ ಲಭ್ಯವಾಗುವ ನಿರೀಕ್ಷೆಯಿದೆ. ವರದಿ ಶೀಘ್ರವಾಗಿ ಸಿಗುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೈಸೂರು ಅರಮನೆ ಎದುರು ಬಲೂನ್ ಸ್ಪೋಟ: ಇಬ್ಬರ ದುರ್ಮರಣ
ಡಿಎನ್‌ಎ ವರದಿ ಬಂದ ಬಳಿಕ ಮೃತರ ಗುರುತು ಖಚಿತವಾದ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಮಾಹಿತಿ ನೀಡಿದ್ದಾರೆ.








