ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರುಎಣಿಕೆ ಕುರಿತು ಗಂಭೀರ ಅನುಮಾನ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ವಿಚಾರದಲ್ಲಿ ಸಂಪೂರ್ಣ ತನಿಖೆ ನಡೆಸಲಾಗುವುದು ಮತ್ತು ಕಾನೂನುಬದ್ಧವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಎಣಿಕೆಯ ಫಲಿತಾಂಶಗಳು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮರುಎಣಿಕೆಯ ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಿರುವುದನ್ನು ಉಲ್ಲೇಖಿಸಿದರು.
ಈ ಬೆಳವಣಿಗೆಯನ್ನು ಅಂತಾರಾಷ್ಟ್ರೀಯ ಮಟ್ಟದ ಸಂಚಿನಂತೆ ಕಾಣುತ್ತಿದೆ ಎಂದು ಹೇಳಿದ ಅವರು, ಅನುಮಾನ ಇದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದೆವು. ಆದರೆ ಇಲ್ಲಿ ಮತ ಎಣಿಕೆ ಬಾಕ್ಸ್‌ಗಳನ್ನು ತೆರೆಯಲಾಗಿದೆ. ನಮ್ಮ ಮತಗಳಿದ್ದ ಬ್ಯಾಲೆಟ್ ಪೇಪರ್‌ಗಳ ಮೇಲೆ ಮತ್ತೊಂದು ಗುರುತು ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.
ಎಲ್ಲ ಬಂಡಲ್‌ಗಳನ್ನು ಮಾನ್ಯ ಎಂದು ಘೋಷಿಸಿದ ಬಳಿಕ ಈ ರೀತಿಯ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ ಅವರು, ಇದು ಸಾಮಾನ್ಯ ಸೋಲು-ಗೆಲುವಿನ ವಿಚಾರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಷಡ್ಯಂತ್ರವಾಗಿದೆ ಎಂದು ಹೇಳಿದರು.ಇದನ್ನು ಓದಿ –ಮೈಸೂರು ದಸರಾ-2025 ಖರ್ಚು ಬಹಿರಂಗ
ಈ ಕುರಿತು ಸರ್ಕಾರದ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು ಮತ್ತು ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.








