ಮೈಸೂರು: ಸಹಜ ಸಮೃದ್ಧ ಮತ್ತು ದೇಸಿರಿ ನ್ಯಾಚುರಲ್ಸ್ ಆಶ್ರಯದಲ್ಲಿ ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ದೇಸಿ ಎಣ್ಣೆ ಮೇಳ’ಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎತ್ತಿನ ಗಾಣ ಗೋವಿನೊಂದಿಗೆ ಸುತ್ತು ಹಾಕಿ ವಿಭಿನ್ನವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಉತ್ಪಾದನೆಯಾಗುತ್ತಿದ್ದ ದೇಸಿ ಗಾಣದ ಎಣ್ಣೆ ನಮ್ಮ ಹಿರಿಯರ ಆರೋಗ್ಯವನ್ನು ಕಾಪಾಡಿದ್ದವು. ಗ್ರಾಹಕರಿಗೆ ಇದರ ಮಹತ್ವ ತಿಳಿಸಲು, ಗಾಣದ ಎಣ್ಣೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡಿ, ಅದರ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸುವಂತೆ ಅವರು ಕೇಂದ್ರೀಯ ಆಹಾರ ತಂತ್ರಜ್ಣಾನ ಸಂಶೋಧನಾಲಯವನ್ನು ಕೋರಿದರು.
ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿತಿದೆ. ಆದರೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆರ್ಥಿಕತೆ ಸಾಧಿಸುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಂಪ್ರದಾಯಿಕ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಗಳಿಸಿಕೊಳ್ಳಬೇಕಾಗಿದೆ. ಗಾಣದ ಎಣ್ಣೆ ಬಳಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕು” ಎಂದರು.

ದೇಸಿ ಎಣ್ಣೆ ಮೇಳವನ್ನು ಸಾನಿಧ್ಯವಹಿಸಿದ್ದ ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಮಾತನಾಡಿ “ ಗಾಣದ ಎಣ್ಣೆಗಳು ಸ್ಥಳೀಯ ಆಹಾರ ಸಂಸ್ಕೃತಿಗೆ ಪೂರಕವಾಗಿವೆ. ಇವುಗಳ ಬಳಕೆಯಿಂದ ರೈತರ ಜೀವನ ಮಟ್ಟ ಸುಧಾರಿಸುತ್ತದೆ, ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ. ದೇಸಿರಿ ನ್ಯಾಚುರಲ್ಸ್ ಗಾಣದ ಗುಣಮಟ್ಟದ ಎಣ್ಣೆಗಳನ್ನು ಉತ್ಪಾದಿಸಿ , ಗ್ರಾಹರಿಗೆ ಕೊಡುವ ಕೆಲಸ ಮಾಡುತ್ತಿರುವುದು ಶ್ಳಾಘನೀಯ” ಎಂದರು.
ಸಿಎಫ್ ಟಿ ಆರ್ ಐ ನಿರ್ದೇಶಕರಾದ ಡಾ.ಗಿರಿಧರ್ ಪಾರ್ವತಮಂ ದೇಸಿರಿ ನ್ಯಾಚುರಲ್ಸ್ ಅಭಿವೃದ್ಧಿಪಡಿಸಿರುವ ಎಣ್ಣೆಯ ಗುಣಮಟ್ಟ ಮತ್ತು ಅದರ ವಿವರಗಳನ್ನು ನೀಡುವ ಕ್ಯೂಆರ್ ಕೋಡ್ ಇರುವ ಎಣ್ಣೆಯ ಬಾಟಲ್ ಬಿಡುಗಡೆ ಮಾತನಾಡಿ, “ ಇತ್ತೀಚಿನ ದಿನಗಳಲ್ಲಿ ಗಾಣದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ದೇಶಿಯ ಮಾರುಕಟ್ಟೆ ಬೇಡಿಕೆಯ ಶೇಕಡ 45 ರಷ್ಟು ಖಾದ್ಯ ತೈಲ ಮಾತ್ರ ಉತ್ಪಾದನೆಯಾಗುತ್ತಿದೆ. 16.5 ಮಿಲಿಯ ಟನ್ ಖಾದ್ಯ ತೈಲ ಹೊರದೇಶಗಳಿಂದ ಆಮದಾಗುತ್ತಿದೆ. ರೈತ ಗುಂಪುಗಳು, ಮಹಿಳಾ ಸಂಘಗಳು ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯವಾಗಿ ಎಣ್ಣೆ ಉತ್ಪಾದನೆ ಮಾಡಿ ಲಾಭಗಳಿಸಬಹುದು ‘’ ಎಂದರು.
ಡಾ.ಖಾದರ್ ವಲಿ ಅನ್ನ –ಆರೋಗ್ಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿದ್ದ ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ ಡಾ.ಮಮತ ಶೇಖರ್ ಮಾತನಾಡಿದರು. ರೋಟರಿ ಕ್ಲಬ್ ಮೈಸೂರಿನ ರೊಟೇರಿಯನ್ ಡಿ.ರವಿಶಂಕರ್, ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿದರು. ದೇಸಿರಿ ನ್ಯಾಚುರಲ್ಸ್ ನ ಎನ್.ಯೋಗಿಶ್, ಎಚ್.ಆರ್.ನವೀನ್ ಕುಮಾರ್, ಎಂ.ಮಹೇಶ ಮತ್ತು ಕೆ.ಎಸ್.ಮಂಜು ಉಪಸ್ಥಿತರಿದ್ದರು.ಇದನ್ನು ಓದಿ –ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಯುವಕ ಬಲಿ
ಮೂರು ದಿನಗಳ ಕಾಲ ನಡೆಯಲಿರುವ ದೇಸಿ ಎಣ್ಣೆ ಮೇಳದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ 50 ಬಗೆಯ ಎಣ್ಣೆಗಳ ಪ್ರದರ್ಶನ ಮತ್ತು ಮಾಹಿತಿ ನೀಡಲಾಗಿತ್ತು. ಎತ್ತಿನ ಗಾಣದ ಎಣ್ಣೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಬಹುದಾಗಿತ್ತು. ಸ್ಥಳದಲ್ಲೇ ಹರಳೆಣ್ಣೆ ಬೇಯಿಸಿ ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ನೀಡಿದ್ದು ಎಲ್ಲರ ಗಮನ ಸೆಳೆಯಿತು.ಜತೆಗೆ ಸಿಎಫ್ ಟಿ ಆರ್ ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ತೋರಿಸಿದರು. ಜೆ ಎಸ್ ಎಸ್ ಆರ್ಯುವೇದ ಮಹಾವಿದ್ಯಾಲಯ ವೈದ್ಯರು ಉಚಿತ ಸಲಹೆ ನೀಡಿದರು. 52 ಮಳಿಗೆಗಳಲ್ಲಿ ಸಾವಯವ ಉತ್ಪನ್ನ, ಮೌಲ್ಯವರ್ಧಿತ ಪದಾರ್ಥಗಳು, ಬೀಜ, ಹಣ್ಣಿನ ಗಿಡ ಮತ್ತು ಸಹಜ ಸೌಂದರ್ಯವರ್ಧಕಗಳು ಮಾರಾಟಕ್ಕಿದ್ದವು.








