ಆರೋಗ್ಯ ಮಿತ್ರ ಲಾವಂಚ
ನಮ್ಮ ಸುತ್ತಮುತ್ತಲು ಹಲವು ಪ್ರಾಕೃತಿಕ ಗಿಡಮೂಲಿಕೆಗಳಿವೆ, ಅವುಗಳನ್ನು ನಾವು ಹೆಚ್ಚಾಗಿ ಸೇವಿಸುವುದಿಲ್ಲ, ಅಷ್ಟೇ ಯಾಕೆ ಅವುಗಳನ್ನು ನಾವು ವಿಶೇಷವೆಂದೂ ಕೂಡ ಪರಿಗಣಿಸುವುದಿಲ್ಲ. ಹಿಂದೆ ಮಣ್ಣಿನ ಪಾತ್ರೆಯಲ್ಲಿ ಕುಡಿಯಲೆಂದು ಇರಿಸಿದ್ದ ನೀರಿಗೆ, ತಲೆಗೆ ಹಾಕಲೆಂದು ಇಟ್ಟ ಎಣ್ಣೆಗೆ, ಮನೆಯ ಕಿಟಕಿಗಳಿಗೆ ಜಾಲರಿಯಂತೆ ಈ ಬೇರನ್ನು ಬಳಸುತ್ತಿದ್ದರು. ಕುಡಿಯುವ ನೀರು ಶುದ್ಧವಾಗುವ ಜೊತೆ ತಂಪಾಗಿ ಸುವಾಸನೆ ಹೊಂದಿದರೆ ಎಣ್ಣೆಯು ತಲೆಗೆ ತಂಪು ನೀಡುತ್ತಿತ್ತು. ಕಿಟಕಿಯಿಂದ ಬರುವ ಗಾಳಿ ಹಿತವಾಗಿರುತ್ತಿತ್ತು. ಹಾಗಾದರೆ ಈ ಬೇರನ್ನು ನೀಡುವ ಸಸ್ಯ ಯಾವುದೆಂಬ ಅಚ್ಚರಿಯೆ?
ಅದೊಂದು ಬರಿಯ ಹುಲ್ಲು ! ಈ ನಿಷ್ಪಾಪಿ ಸಸ್ಯ ಅಥವಾ ಹುಲ್ಲಿನ ಹೆಸರೇ ಲಾವಂಚ. ಕನ್ನಡದಲ್ಲಿ ಲಾವಂಚ, ಕಾಡುದಪ್ಪ, ಕರಿಸಜ್ಜೆ ಹುಲ್ಲು, ಮಡಿವಾಳ ಗಿಡ ಎಂದೆಲ್ಲ ಕರೆಸಿಕೊಳ್ಳುವ ಇದನ್ನು ತುಳುವಿನಲ್ಲಿ ಮಲ್ಲಿವಾಳ್, ಮುಡ್ಯಲ, ರಾಮಂಚ ವೆನ್ನುವರು. ನಮ್ಮ ಹಿರಿಯರು ಈ ಹುಲ್ಲಿನ ಬೇರನ್ನು ಚೆನ್ನಾಗಿ ತೊಳೆದು ಒಣಗಿಸಿ ತಮ್ಮ ಮನೆಗಳಲ್ಲಿ ಮರದ ಕಲೆಂಬಿ (ದೊಡ್ಡ ಪೆಟ್ಟಿಗೆ) ಯಲ್ಲಿದ್ದ ಅಕ್ಕಿ, ದಿಂಬು, ಹೊದಿಕೆ, ಬಟ್ಟೆಗಳ ನಡುವೆ ಮಾತ್ರವಲ್ಲದೆ ಅಜ್ಜಿ, ಅಮ್ಮ ಕಬ್ಬಿಣದ ಪೆಟ್ಟಿಗೆಯೊಳಗಿಟ್ಟ ತಮ್ಮ ಸೀರೆಗಳ ನಡುವೆ ಜೋಪಾನವಾಗಿ ಜೋಡಿಸಿಡುತ್ತಿದ್ದರು. ಸೊಳ್ಳೆ, ಕೀಟ, ತಿಗಣೆ, ಜಿರಳೆಗಳ ನಿವಾರಣೆಗೆ ಈ ಬೇರು ಉಪಯುಕ್ತವಾಗಿತ್ತು.
ಇತ್ತೀಚಿಗೆ ಜನರು ಲಾವಂಚ ಅಥವಾ ಮಡಿವಾಳ ಹುಲ್ಲಿನ ಬೇರುಗಳನ್ನು ಬಳಸುವುದನ್ನೇ ಮರೆತು ಬಿಟ್ಟಿದ್ದಾರೆ. ಫ್ರಿಡ್ಜ್ ಇಲ್ಲದ ಕಾಲದಲ್ಲಿ ದೇಹವನ್ನು ತಂಪಾಗಿಸಲು ಲಾವಂಚ ಬಳಸಲಾಗುತ್ತಿತ್ತು. ಅದರಲ್ಲಿಯೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಲಾವಂಚ ಬಳಸುವುದರಿಂದ ಬೇಸಿಗೆಯಲ್ಲಿ ಬರುವ ರೋಗಗಳಿಂದ ರಕ್ಷಣೆ ಸಿಗುತ್ತಿತ್ತು. ಲಾವಂಚ ಅಥವಾ ವೇಟಿವೆರ್ ನೀರನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಲಾವಂಚದ ಬೇರು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲ್ಪಡುತ್ತದೆ. ಮೈಕೈ ನೋವು, ವಾತ, ಹೊಟ್ಟೆ ನೋವು, ಜಂತುಹುಳದ ಸಮಸ್ಯೆ, ಮಲಬದ್ಧತೆ, ತಲೆನೋವು, ನರಮಂಡಲದ ಶಾಂತತೆ, ಒತ್ತಡ ನಿವಾರಣೆ, ರಕ್ತ ಪರಿಚಲನೆಯ ಸುಧಾರಣೆ, ಜೀರ್ಣಾಂಗ ವ್ಯವಸ್ಥೆ ಸರಿಪಡಿಸಲು, ಉರಿಮೂತ್ರ, ಕೈಕಾಲು ನೋವು, ನರಗಳ ನಿಶ್ಯಕ್ತಿ, ಮೊಡವೆ, ಸಂಧಿವಾತ, ನಂಜು ನಿವಾರಕ, ಜ್ವರ, ಬೆನ್ನು ನೋವು ಇತ್ಯಾದಿಗಳಿಗೆ ಔಷಧಿಯಾಗಿದೆ. ಬೇಸಿಗೆಯಲ್ಲಿ ಬಿಸಿಲಬೇಗೆಯಿಂದ ಉಂಟಾಗುವ ಕಾಯಿಲೆಗೆ ರಕ್ಷಣೆ ಲಾವಂಚದ ಬೇರು ಹಾಕಿರಿಸಿದ ನೀರು. ತೈಲವು ಚರ್ಮ ರಕ್ಷಣೆಗೆ ಪ್ರಮುಖವಾಗಿರುವುದರಿಂದ ಕ್ರೀಮ್, ಸಾಬೂನುಗಳಲ್ಲಿ ಬಳಸುತ್ತಾರೆ.
ಬೇಸಿಗೆ ಕಾಲದಲ್ಲಿ ಲಾವಂಚ ನೀರನ್ನು ಸೇವಿಸುವ ಲಾಭಗಳು

- ಬೇಸಿಗೆಯಲ್ಲಿ ದೇಹದ ದುರ್ವಾಸನೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಇದನ್ನು ತಪ್ಪಿಸಲು ಲಾವಂಚ ನೀರನ್ನು ಸೇವಿಸಬಹುದು .
- ಹೊಟ್ಟೆಯನ್ನು ಸ್ವಚ್ಛಗೊಳಿಸಲು ಲಾವಂಚ ನೀರನ್ನು ಕುಡಿಯಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಈ ನೀರನ್ನು ಕುಡಿದರೆ ಉತ್ತಮ ಪರಿಹಾರ ದೊರಕುತ್ತದೆ. ಈ ನೀರು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
- ಲಾವಂಚ ಬೇರಿನ ನೀರನ್ನು ಸೇವಿಸಿದರೆ ಬೇಸಿಗೆಯಲ್ಲಿನ ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ. ಬೇಸಿಗೆಯಲ್ಲಿ ತಲೆಯಲ್ಲಿ ತುರಿಕೆಯ ಸಮಸ್ಯೆ ಇರುವವರು ಈ ನೀರನ್ನು ಕುಡಿಯಬಹುದು .
4.ಲಾವಂಚ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಭಟ್ಟಿ ಇಳಿಸುವ ಮೂಲಕ ಅದರಿಂದ ತೈಲವನ್ನು ತಯಾರಿಸಲಾಗುತ್ತದೆ. ಈ ತೈಲವನ್ನು ಸಾಮಾನ್ಯವಾಗಿ ಸಾಬೂನು, ಸುಗಂಧವರ್ಧಕ, ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ತೈಲವನ್ನು ಮೈ-ಕೈ ನೋವು ನಿವಾರಿಸಲು ಕೂಡ ಬಳಸಲಾಗುತ್ತದೆ. ಇದಲ್ಲದೆ ವಾತ, ಹೊಟ್ಟೆಯಲ್ಲಿ ಜಂತುವಿನ ಸಮಸ್ಯೆ, ಹೊಟ್ಟೆಶೂಲೆ ಇತ್ಯಾದಿಗಳ ಸಮಸ್ಯೆ ನಿವಾರಣೆಗೆ ಲಾವಂಚ ಬೆರೆಸಿದ ನೀರನ್ನು ಕುದಿಸಿ, ನಂತರ ಸೋಸಿ ಕುಡಿಯಬಹುದು. ಹಲವಾರು ಆಯುರ್ವೇದ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ.
ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಅದರ ಹೊರತಾಗಿ ಅದನ್ನು ಕೊಠಡಿಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯನ್ನು ತಂಪಾಗಿಸಬಹುದು. ಲಾವಂಚದ ಹುಲ್ಲನ್ನು ಕೋಣೆಗೆ ಕಿಟಕಿಗಳಿಗೆ ಕಟ್ಟಿ. ದಿನಕ್ಕೆರಡು ಬಾರಿ ಅದಕ್ಕೆ ನೀರು ಸಿಂಪಡಿಸಿ.ಕುಡಿಯುವ ನೀರಿನ ಪಾತ್ರೆಗೆ ಅಥವಾ ಹೂಜಿಗೆ ಲಾವಂಚದ ಬೇರನ್ನು ಹಾಕಿಟ್ಟು ಅರ್ಧ ಗಂಟೆ ಬಳಿಕ ಕುಡಿಯಿರಿ. ಇದು ತಂಪಾಗಿ, ಶುದ್ಧವಾಗಿರುತ್ತದೆ.
ನೆನೆಸಿಟ್ಟ ಲಾವಂಚದ ಮೇಲೆ ತರಕಾರಿ ಹಣ್ಣುಗಳನ್ನು ಇಟ್ಟರೆ ಅದು ಬೇಗ ಕೆಡುವುದಿಲ್ಲ. ಕಾಲುಗಳು ವಿಪರೀತ ಸುಸ್ತಾಗಿದ್ದರೆ ಲಾವಂಚದ ಬೇರಿನ ಮೇಲೆ ಐದು ನಿಮಿಷ ಇಟ್ಟು ನೋಡಿ, ನೋವು ಮಾಯವಾಗಿ ಕಾಲುಗಳಿಗೆ ತಂಪಾದ ಅನುಭವವಾಗುತ್ತದೆ.
ಹಲವಾರು ಗೃಹಾಲಂಕಾರ ವಸ್ತುಗಳ ತಯಾರಿಕೆಗೂ ಕೂಡ ಲಾವಂಚ ಬೇರನ್ನು ಬಳಸಲಾಗುತ್ತದೆ. ಇದರಿಂದ ಚಾಪೆ, ಬುತ್ತಿ, ಬೀಸಣಿಕೆ ಇತ್ಯಾದಿ ವಸ್ತುಗಳನ್ನು ತಯಾರಿಸಬಹುದು. ಲಾವಂಚ ಬೇರುಗಳಿಗೆ ನೀರು ಮತ್ತು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹೀಗಾಗಿ ಕೆಲ ಇಳಿಜಾರು ಪ್ರದೇಶಗಳಲ್ಲಿನ ರೈತರು ನೀರನ್ನು ಭೂಮಿಯಲ್ಲಿ ಇಂಗಿಸಲು ಲಾವಂಚ ಹುಲ್ಲನ್ನು ಬೆಳೆಯುತ್ತಾರೆ. ಇದೆ ಕಾರಣಕ್ಕೆ ಇದನ್ನು ‘ಬಡವ ನಿರಾವರಿ’ ಎಂದೂ ಕೂಡ ಕರೆಯಲಾಗುತ್ತದೆ. ಈ ಹುಲ್ಲನ್ನು ಜಾನುವಾರುಗಳಿಗೆ ತಿನ್ನಲೂ ಕೂಡ ಕೊಡಬಹುದು.
ಲಾವಂಚದ ಬೇರುಗಳಿಂದ ಹೆಣೆದ ಬೀಸಣಿಗೆಗೆ ನೀರು ಚಿಮುಕಿಸಿ ಗಾಳಿ ಹಾಕುವ ಕ್ರಮ ಮೊಗಲ್ ದೊರೆಗಳ ಕಾಲದಲ್ಲಿತ್ತು ಎನ್ನುತ್ತದೆ ಇತಿಹಾಸ.

ಪ್ರಭು ಶ್ರೀರಾಮ ಚಂದ್ರ ಸೀತೆ, ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ ಕುಡಿಯುವ ನೀರು ಶುದ್ಧೀಕರಿಸಲು ಲಾವಂಚ ಬಳಸುತ್ತಿದ್ದರೆನ್ನಲಾಗುತ್ತದೆ. ಆದ್ದರಿಂದಲೇ ರಾಮಾಂಚ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ.
ಹಿರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ “ಪರ್ವ” ಕಾದಂಬರಿಯಲ್ಲಿ ದ್ರೌಪದಿ ತನ್ನ ಮಕ್ಕಳಿಗೆ ತಂಪಾಗಲೆಂದು ಬೇಸಿಗೆಯಲ್ಲಿ ಕಿಟಕಿಗಳಿಗೆ ಲಾವಂಚದ ಬೇರಿನ ಹೆಣೆದ ಪರದೆ ಹಾಕಿ ಆಗಾಗ ನೀರು ಚಿಮುಕಿಸುತ್ತಿದ್ದಳೆಂದಿದ್ದಾರೆ. ಗುಬ್ಬಿ ಗೋಸಲ ಚನ್ನ ಬಸವೇಶ್ವರರಿಗೆ ಭೀಮನ ಅಮವಾಸ್ಯೆ ಪ್ರಯುಕ್ತ ಲಾವಂಚದ ಅಲಂಕಾರವನ್ನು ಮಾಡಿದ್ದರು. ತುಮಕೂರಿನಲ್ಲಿ ಶನಿದೇವರಿಗೂ ಲಾವಂಚದ ಬೇರಿನ ಅಲಂಕಾರ ಮಾಡಿ ಪೂಜಿಸುತ್ತಾರೆ. ಉಡುಪಿ ಜಿಲ್ಲೆಯ ದೇವಸ್ಥಾನ ವೊಂದರಲ್ಲಿ ಲಾವಂಚದ ಬೇರು ಪ್ರಸಾದ ರೂಪದಲ್ಲಿ ದೊರಕುವುದಂತೆ. ಭಟ್ಕಳದ “ಉಶಿರಾ” ಕಂಪನಿ ದಶಕಗಳಿಂದ ಲಾವಂಚದ ಕರಕುಶಲ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ದೇವರ ಕಲಾಕೃತಿ, ಯಕ್ಷಗಾನ ಮುಖವಾಡ, ಹೂದಾನಿ, ಹಾರ, ಚಾಪೆ, ವ್ಯಾನಿಟಿ ಬ್ಯಾಗ್, ಪರ್ಸ್, ಮಕ್ಕಳ ಆಟಿಕೆ, ಕುರ್ಚಿ, ಮಂಚವನ್ನೂ ಲಾವಂಚದ ಬೇರಿನಿಂದ ತಯಾರಿಸುತ್ತಾರೆ. ಇದರ ಬೇರಿನ ಟೊಪ್ಪಿಯಂತೂ ಎಲ್ಲರಿಗೂ ಅಚ್ಚುಮೆಚ್ಚು. ಸ್ವಲ್ಪ ನೀರು ಚಿಮುಕಿಸಿ ತಲೆಗೇರಿಸಿದರೆ ಶೀತಲ ಪೆಟ್ಟಿಗೆ ತಲೆಗಿರಿಸಿಂದತೆಯೇ ಸರಿ. ಶೀತ ಸಮಸ್ಯೆ ಇರುವವರು ಕಿವಿನೋವು, ಅಸ್ತಮಾ ಇರುವವರು ಲಾವಂಚದಿಂದ ದೂರವಿದ್ದರೆ ಒಳಿತು.

ಸೌಮ್ಯ ಸನತ್








