ದಿಸ್ಪುರ: ಅಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುಖೋಯ್ Su-30 ಎಂಕೆಐ ಯುದ್ಧವಿಮಾನ ಪತನಗೊಂಡು ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿರುವ ದುರ್ಘಟನೆ ನಡೆದಿದೆ.
ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
Su-30 MKI ಯುದ್ಧವಿಮಾನ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಜೋರ್ಹತ್ ವಾಯುನೆಲೆಯಿಂದ ಹಾರಿದ ಕೆಲವೇ ಸಮಯದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ವಿಮಾನ ಪತನಗೊಂಡ ಸ್ಥಳವು ಜೋರ್ಹತ್ ವಾಯುನೆಲೆಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಗುಡ್ಡಗಾಡು ಪ್ರದೇಶವಾಗಿತ್ತು.
ರಷ್ಯಾ ಮೂಲದ ಈ ಯುದ್ಧವಿಮಾನ ಜೊತೆಗೆ ರಾತ್ರಿ ಸುಮಾರು 7.42ಕ್ಕೆ ಸಂವಹನ ಕಳೆದುಹೋಗಿತ್ತು. ನಂತರ ಅದು ದೂರದ ಗುಡ್ಡ ಪ್ರದೇಶದಲ್ಲಿ ಪತನಗೊಂಡಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದು, ಬೆಟ್ಟದ ದಿಕ್ಕಿನಿಂದ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ನಂತರ ಆಕಾಶದಲ್ಲಿ ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.








