ಒಂದು ವಿಭಿನ್ನ ಒಳನೋಟ.
ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.
ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವ ಮೂಲಕ ಆಕೆಯ ಮೇಲೆ ಮತ್ತಷ್ಟು ಹೊರಿಸುತ್ತಾರೆ ಭಾರ.
ಹೀಗೆ ಹೇಳಲು ಕಾರಣ ಇದೆ… ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ ನಮ್ಮೆಲ್ಲರ ಬದುಕಿನಲ್ಲಿ ತನ್ನದೇ ಆದ ಪಾತ್ರಗಳನ್ನು ನಿಭಾಯಿಸುತ್ತಾಳೆ. ಈ ಎಲ್ಲ ಪಾತ್ರಗಳನ್ನು ನಮ್ಮ ಸಾಮಾಜಿಕ ವ್ಯವಸ್ಥೆಯು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ. ಆಯಾ ವಯೋಮಾನದ ಆದ್ಯತೆಗೆ ಅನುಗುಣವಾಗಿ ಅವರನ್ನು ಅವಲಂಬಿಸುತ್ತದೆ, ಅವರಿಂದ ಪೊರೆಯಲ್ಪಡುತ್ತದೆ ಮತ್ತು ಅನವಶ್ಯಕ ಎನಿಸಿದಾಗ ಅವರಿಂದ ದೂರ ಸರಿಯುತ್ತದೆ ಕೂಡ. ಚಿಕ್ಕಂದಿನಲ್ಲಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ತಾಯಿಯನ್ನು ಅವಲಂಬಿಸುವ ಮಗು, ಬೆಳೆದು ದೊಡ್ಡವನಾಗುತ್ತಿದ್ದಂತೆ ಒಡಹುಟ್ಟಿದ ಸಹೋದರಿಯರನ್ನು, ವಿವಾಹದ ನಂತರ ಪತ್ನಿಯನ್ನು ನಂತರ ತಮ್ಮ ಹೆಣ್ಣು ಮಕ್ಕಳು ಹಾಗೂ ವಯಸ್ಸಾದ ಸಮಯದಲ್ಲಿ ಸೊಸೆಯನ್ನು ಅವಲಂಬಿಸುತ್ತಾರೆ. ತಾನು ಅವರಿಗೆ ಹೊರೆಯಾದರೂ ಕೂಡ ಪ್ರೀತಿಯಿಂದ ಸಲಹುವ ಅವರನ್ನು, ತನಗೆ ಅವರು ಹೊರೆ ಎಂಬ ಭಾವ ಉದ್ಭವವಾದಾಗ ಅಸಹನೆ, ಅಸಮಾಧಾನಗಳು ಸಹಜ.
ಅರೆ ಇದೇನಿದು ಹೀಗೆ ಹೇಳುತ್ತಾರಲ್ಲ ಹೆಣ್ಣು ಮಕ್ಕಳನ್ನು ನಾವು ಕೌಟುಂಬಿಕವಾಗಿ, ಸಾಮಾಜಿಕವಾಗಿ,ಆರ್ಥಿಕವಾಗಿ ಸಲಹುವುದಿಲ್ಲವೇ ಎಂದು ಕೇಳಬಹುದು. ಖಂಡಿತವಾಗಿಯೂ ನಿಮ್ಮ ಮಾತು ಸರಿ.
ನೀವು ಹೆಣ್ಣು ಮಕ್ಕಳನ್ನು ತಾಯಿಯಾಗಿ, ಒಡಹುಟ್ಟಿದವಳಾಗಿ, ಪತ್ನಿಯಾಗಿ, ಮಗಳಾಗಿ, ಸ್ನೇಹಿತರಾಗಿ ಖಂಡಿತವಾಗಿಯೂ ಸಲ್ಲಿಸುತ್ತೀರಿ ಆದರೆ ಓರ್ವ ಹೆಣ್ಣು ಮಕ್ಕಳನ್ನು ಕೇವಲ ಓರ್ವ ಸ್ತ್ರೀಯಾಗಿ
ಭಾವಿಸಿ ಸಲಹುತ್ತೀರಾ ಎಂದು ಕೇಳಿದರೆ ನಿಮ್ಮ ಉತ್ತರ ಗೊಂದಲದಿಂದ ಕೂಡಿರುತ್ತದೆ ಅಥವಾ ಉತ್ತರಿಸಲು ಪದಗಳು ದೊರೆಯದೆ ಕಕ್ಕಾಬಿಕ್ಕಿ ಆಗುತ್ತೀರಿ.
ನಿಜ ಪುರುಷ ಸ್ವಾಮ್ಯದ ನಮ್ಮ ಈ ಸಮಾಜದಲ್ಲಿ ಪುರುಷ ಜನಾಂಗಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವವರೆಗೆ ಮಾತ್ರ ಹೆಣ್ಣು ಮಕ್ಕಳನ್ನು ಪುರಸ್ಕರಿಸಲಾಗುತ್ತದೆ ಆಕೆಯ ಎಲ್ಲ ಪಾತ್ರಗಳನ್ನು ಕೊಂಡಾಡಲಾಗುತ್ತದೆ. ಒಂದೊಮ್ಮೆ ಆಕೆ ತನ್ನ ಅಸ್ತಿತ್ವದ ಕುರಿತು ಮಾತನಾಡಿದರೆ ತನ್ನ ವೈಯುಕ್ತಿಕ ಹಿತಾಸಕ್ತಿಯ ಕುರಿತು ಯೋಚಿಸಿದಾಗ ಆಕೆ ಸ್ವಾರ್ಥಿ ಎನಿಸಿಕೊಳ್ಳುತ್ತಾಳೆ. ಕುಟುಂಬದ ಎಲ್ಲರಿಗಿಂತ ಮೊದಲು ತನ್ನ ಯೋಗ ಕ್ಷೇಮವನ್ನು ತನ್ನ ಇಷ್ಟಾನಿಷ್ಠಗಳನ್ನು ಅರಿತು ಅದರಂತೆ ನಡೆದುಕೊಳ್ಳುವ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಬಿಂಬಿಸುತ್ತಾರೆ.
ಬಹುಶಹ ಪುರುಷ ಸ್ವಾಮ್ಯದ ಈ ಸಮಾಜದಲ್ಲಿ ಪುರುಷರ ಈ ಧೋರಣೆಗೆ ಕೆಲಮಟ್ಟಿಗೆ ಅಲ್ಲಲ್ಲ… ಬಹಳಷ್ಟು ಮಟ್ಟಿಗೆ ಹೆಣ್ಣು ಮಕ್ಕಳು ಕೂಡ ಕಾರಣ.
ಅವರೆಂದೂ ತಮ್ಮ ಕುರಿತು ತಾವು ಚಿಂತಿಸುವುದಿಲ್ಲ ಕುಟುಂಬದ ಸರ್ವ ಸದಸ್ಯರ ಆಗು ಹೋಗುಗಳಿಗೆ ತಾವೇ ಜವಾಬ್ದಾರಿಗಾಗಿ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾ ತಾವು ಕೂಡ ಓರ್ವ ಸ್ವತಂತ್ರ ವ್ಯಕ್ತಿ ತಮಗೂ ಒಂದು ವ್ಯಕ್ತಿತ್ವವಿದೆ ತಮಗೂ ಕೂಡ ತಮ್ಮದೇ ಆದ ರೀತಿಯಲ್ಲಿ ಬದುಕಿನಲ್ಲಿ ಮುಂದುವರೆಯುವ, ಏನನ್ನಾದರೂ ಸಾಧಿಸುವ ಹಕ್ಕಿದೆ ಎಂಬುದನ್ನು ಅವರು ಮರೆತಿರುತ್ತಾರೆ…. ಅಕಸ್ಮಾತ್ ನೆನಪಿಟ್ಟು ತಮ್ಮ ಹಿತಾಸಕ್ತಿಯ ಕುರಿತು ಮಾತನಾಡಿದಾಗ ಗಂಡ, ಮನೆ, ಮಕ್ಕಳು, ಸಂಸಾರದ ಕುರಿತು ಕಿಂಚಿತ್ತು ಕಾಳಜಿ ಇಲ್ಲದ ಬೇಜವಾಬ್ದಾರಿ ಮನುಷ್ಯಳು ಎಂದು ಆಕೆಯನ್ನು ಈ ಸಮಾಜ ಬಿಂಬಿಸುತ್ತದೆ…. ಉದ್ದೇಶಪೂರ್ವಕವಾಗಿ ಅದನ್ನು ತಳ್ಳಿ ಹಾಕಲಾಗುತ್ತದೆ.
ಹೆಣ್ಣು ಸರ್ವ ಶಕ್ತಿವಂತಳು ನಿಜ… ಆಕೆ ಏಕಕಾಲದಲ್ಲಿ ಮನೆ, ಮಕ್ಕಳು, ಪತಿ ಕುಟುಂಬ ಹಾಗೂ ತನ್ನ ವೃತ್ತಿಯನ್ನು ವಿಭಾಯಿಸಬಲ್ಲಳು. ಎಲ್ಲವನ್ನು ನಿಭಾಯಿಸಿಯು ಕೂಡ ಪತಿಯ ಅಸಡ್ಡೆ,, ಅಸಹನೆಗಳು ಅತ್ತೆ ಮಾವರ ಕಿರಿಕಿರಿ ಮತ್ತು ಹೀಯಾಳಿಕೆಗಳು, ಮಕ್ಕಳ ಅವಕಾಶವಾದಿತನಗಳು ಆಕೆಯ ಮನಸ್ಸನ್ನು ಇನ್ನಿಲ್ಲದಂತೆ ಕಾಡುತ್ತವೆ.
ಆರ್ಥಿಕ ಭದ್ರತೆ ಆಕೆಯಲ್ಲಿ ಧೈರ್ಯವನ್ನು ತುಂಬಬಹುದು, ಆದರೆ ಕೌಟುಂಬಿಕ ಭದ್ರತೆ ಆಕೆಗೆ ಭಾವನಾತ್ಮಕ ಬೆಂಬಲ ನೀಡುತ್ತದೆ… ಇನ್ನಷ್ಟು ಸಶಕ್ತಳಾಗಿ ಕಾರ್ಯನಿರ್ವಹಿಸಲು ಆಕೆಗೆ ಸಹಾಯಕವಾಗುತ್ತದೆ. ಆತ್ಮ ತೃಪ್ತಿಯಿಂದ ಜೀವಿಸಲು ಅನುವು ಮಾಡಿಕೊಡುತ್ತದೆ.
ಈ ಪ್ರಕೃತಿ ಗಂಡು ಹೆಣ್ಣಿನಲ್ಲಿ ತಾರತಮ್ಯವನ್ನು ಮಾಡಿಲ್ಲ. ಬಹುಶಹ ಪುರುಷನಿಗಿಂತ ತುಸು ಹೆಚ್ಚಿನದನ್ನು ಆಕೆಗೆ ನೀಡಿದೆ ಬದುಕು ತನಗೆ ಕೊಡ ಮಾಡಿರುವ ಎಲ್ಲ ಪಾತ್ರಗಳನ್ನು ನಿಭಾಯಿಸುತ್ತ ಆಕೆ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಿ.
ಬಹಳಷ್ಟು ಬಾರಿ ನಾವು ನೋಡಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ರಕ್ಷಣಾತ್ಮಕವಾಗಿ ಬೆಳೆಸುತ್ತಾರೆ. ಯಾವುದೇ ರೀತಿಯ ತೊಂದರೆಗಳು ಅವರನ್ನು ಸೋಕದಂತೆ ಕಣ್ಣ ರೆಪ್ಪೆಯ ಹಾಗೆ ಅವರನ್ನು ಕಾಯುತ್ತಾರೆ.ಆದರೆ ಹೀಗೆ ಮಾಡುವ ಮೂಲಕ ಅವರು ಆಕೆಯಲ್ಲಿರುವ ಸ್ವಾಭಾವಿಕ ಪರಿಸ್ಥಿತಿಗಳನ್ನು ಎದುರಿಸುವಂತಹ ಗುಣವನ್ನು ಮೊಟಕು ಮಾಡುತ್ತಾರೆ…. ಇದು ಖಂಡಿತವಾಗಿಯೂ ಸಲ್ಲದು.
ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಅವರು ಇರುವಂತೆಯೇ ಅವರನ್ನು ಒಪ್ಪಿಕೊಳ್ಳಬೇಕು. ಪೂಜ್ಯಶ್ರೀ ಸ್ವಾಮಿ ವಿವೇಕಾನಂದರು ಒಂದೊಮ್ಮೆ ಹೆಣ್ಣು ಮಕ್ಕಳ
ಧೀ ಶಕ್ತಿಯ ಕುರಿತು ಹೇಳುವಾಗ ನೀವು ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಸಾಕು ಉಳಿದುದನ್ನು ಅವರೇ ನಿಭಾಯಿಸುತ್ತಾರೆ ಎಂದು ಹೇಳಿದರಂತೆ. ಅಷ್ಟು ಮಟ್ಟಿಗಿನ ವಿಶ್ವಾಸ ಅವರಿಗೆ ಭಾರತದ ಮಹಿಳಾ ಶಕ್ತಿಯ ಮೇಲೆ ಇತ್ತು. ಪ್ರತಿಯೊಬ್ಬ ತಂದೆಗೂ ತನ್ನ ಮಗಳ ಮೇಲೆ ಆ ರೀತಿಯ ವಿಶ್ವಾಸ ನಂಬಿಕೆ ಮತ್ತು ಭರವಸೆ ಇರಲೇಬೇಕು. ಹಾಗೆಯೇ ತನ್ನ ಮನೆ ಮನವನ್ನು ಬೆಳಗಲು ಬರುವ ಹೆಣ್ಣು ಮಕ್ಕಳ ಮೇಲೆ ಕೂಡ ಇರಲೇಬೇಕು.
ಹೆಣ್ಣು ಮಕ್ಕಳು ಜಗವನ್ನು ಬೆಳಗುವ ಸೂರ್ಯನ ಹಾಗೆ. ಯಾವ ರೀತಿ ಸೂರ್ಯ ಅದೆಷ್ಟೇ ಬೈಸಿಕೊಂಡರೂ ಕೂಡ ತನ್ನನ್ನು ತಾನು ಉರಿಸಿಕೊಂಡು ಜಗಕೆಲ್ಲ ಬೆಳಕು, ಅನ್ನ, ಆಹಾರ ಹಾಗೂ ಬದುಕನ್ನು ನೀಡಲು ಕಾರಣನಾಗುತ್ತಾನೆಯೋ ಹಾಗೆಯೇ ಹೆಣ್ಣು ಮಕ್ಕಳು ಕೂಡ.
ಅವರನ್ನು ಬೇಶರತ್ತಾಗಿ ಗೌರವಿಸಿ, ಕರಾರುಗಳಿಲ್ಲದೆ ಪ್ರೀತಿಸಿ ತಕರಾರು ಮಾಡದೆ ಬಾಳಿಸಿ…. ಅವರ ನಗುವಿನಲ್ಲಿ ಜಗದ ಅಂದ ಅಡಗಿದೆ, ಅವರ ನೋವಿನಲ್ಲಿ ಜಗತ್ತು ಅಂಧಕಾರದಲ್ಲಿ ಮುಳುಗುತ್ತದೆ ಎಂಬ ಸತ್ಯವನ್ನು ಅರಿಯಿರಿ…. ಪ್ರತಿ ಮನೆಯಲ್ಲೂ ಮಹಿಳೆ ಕೇವಲ ತನ್ನ ಪ್ರೀತಿ ಮಮತೆ, ಅಕ್ಕರೆ, ಧೈರ್ಯ, ಸಹನೆ, ಪ್ರತಿಭೆ, ಶಾಂತಿ, ತಾಳ್ಮೆ ಸೌಂದರ್ಯ ಅಂದ ಚಂದಗಳ ಪ್ರತಿರೂಪವಾಗಲ್ಲದೆ ತಾನು ತಾನಾಗಿರುವ ಸ್ವತಂತ್ರ ವ್ಯಕ್ತಿಯಾಗಿ ರೂಪುಗೊಳ್ಳಲು ಕೂಡ ಅವಕಾಶ ಮಾಡಿಕೊಡಿ….ಅದುವೇ ನಿಜವಾದ ಮಹಿಳಾ ದಿನಾಚರಣೆಗೆ ನಾಂದಿಯಾಗಲಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








