ಬೆಂಗಳೂರು : ನಗರದ ಪ್ರಮುಖ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಆಗಿರುವ ನೈಸ್ ರಸ್ತೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಸಮೀಪ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 1.5 ಕಿ.ಮೀ ಉದ್ದದ ಹೊಸ ರಸ್ತೆ ಶೀಘ್ರದಲ್ಲೇ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಟೋಲ್ ವಸೂಲಿ ಮಾಡುವುದನ್ನು ರದ್ದುಪಡಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಾಮೋಜಿ ಗೌಡ ಅವರು ನೈಸ್ ರಸ್ತೆ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ವಿಚಾರವನ್ನು ಪ್ರಸ್ತಾಪಿಸಿದರು. ನೈಸ್ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ಅಪಘಾತಗಳು ಹೆಚ್ಚುತ್ತಿರುವುದಲ್ಲದೆ, ರಸ್ತೆ ನಿರ್ವಹಣೆಯೂ ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು. ಜೊತೆಗೆ ರಾಜ್ಯ ಸರ್ಕಾರ ಮತ್ತು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ನಡುವಿನ ಒಪ್ಪಂದ ಅವಧಿ ಮುಕ್ತಾಯವಾಗುತ್ತಿರುವುದಾದರೂ, ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ ಎಂದು ಹೇಳಿದರು.
ಒಪ್ಪಂದದಲ್ಲಿ ಯಾವ ಷರತ್ತುಗಳನ್ನು ವಿಧಿಸಲಾಗಿತ್ತು, ಅವುಗಳನ್ನು ನವೀಕರಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಟೋಲ್ ದರ ಹೆಚ್ಚಳಕ್ಕೆ ಕಂಪನಿಗೆ ಸರ್ಕಾರದಿಂದ ಅನುಮತಿ ಪಡೆದಿದೆಯೇ ಹಾಗೂ ನೈಸ್ ರಸ್ತೆಯನ್ನು ಸರ್ಕಾರದ ನಿಯಂತ್ರಣಕ್ಕೆ ತರಲು ಯೋಚಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಕೇಳಿದರು.ಇದನ್ನು ಓದಿ –ಸ್ನೇಹಿತನಿಂದಲೇ ಯುವಕನ ಹತ್ಯೆ: ಗಾಂಜಾ ಮತ್ತಿನಲ್ಲಿ ಕೊಲೆ
ಇದಕ್ಕೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಚಿವ ಸಂಪುಟದ ಉಪ ಸಮಿತಿ ನೈಸ್ ರಸ್ತೆ ಯೋಜನೆಯ ಸ್ಥಿತಿ, ಒಪ್ಪಂದದ ಷರತ್ತುಗಳು ಮತ್ತು ಟೋಲ್ ವಸೂಲಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಶೀಲಿಸಲಿದೆ ಎಂದು ಹೇಳಿದರು. ಉಪ ಸಮಿತಿ ತನ್ನ ವರದಿ ಸಲ್ಲಿಸಿದ ನಂತರ ದ್ವಿಚಕ್ರ ವಾಹನಗಳಿಗೆ ಟೋಲ್ ರದ್ದುಪಡಿಸುವ ಯೋಜನೆ ಸೇರಿದಂತೆ ಮುಂದಿನ ಕ್ರಮಗಳ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.








