ರಾಮ ಶಬ್ದದ ಅರ್ಥ ರಮಯತೇ ಇತಿ ರಾಮಂ, ಮನಸ್ಸಿಗೆ ಆನಂದ ನೀಡುವಂತಹದ್ದು ಎಂಬುದು ರಾಮ ಪದದ ಅರ್ಥವಾಗಿದೆ. ಭಗವಂತನ 7ನೇ ಅವತಾರವೇ ರಾಮಾವತಾರ. ರಾಮಾವತಾರದಲ್ಲಿ ಮನುಷ್ಯ ಜನ್ಮವನ್ನು ತಳೆದ ಭಗವಂತ ಮನುಷ್ಯನಾದವನು ಹೇಗೆಲ್ಲ ಬದುಕಬೇಕ ಎಂದು ತೋರಿಸಿ ಮನುಷ್ಯ ಜನ್ಮದಲ್ಲಿ ನಾವು ಅನುಸರಿಸಬೇಕಾದ ಜೀವನಶೈಲಿ ಮತ್ತು ಆದರ್ಶವನ್ನು ಜಗತ್ತಿಗೆ ತೋರಿಸಿ ನಮಗೆ ಮಾರ್ಗದರ್ಶಕನಾಗಿ ಜೀವನವನ್ನು ನಡೆಸಿದ್ದಾನೆ. ಸರ್ವಶಕ್ತನಾದ ಪರಮಾತ್ಮನು ಮನುಷ್ಯ ಜನ್ಮದಲ್ಲಿ ಪಿತೃವಾಕ್ಯ ಪರಿಪಾಲನೆ, ಬ್ರಾತೃಪ್ರೇಮ, ಗುರುಹಿರಿಯರಿಗೆ ಗೌರವ ಕೊಟ್ಟು ಅವರ ಆದೇಶಗಳನ್ನು ಸದಾ ಪಾಲಿಸುತ್ತಾ, ಏಕ ಪತ್ನಿ ವೃತಸ್ಥ%ನಾಗಿ, ಕ್ಷತ್ರೀಯ ಧರ್ಮದ ಪಾಲನೆ ಮಾಡುತ್ತಾ ಅಸಹಾಯಕರಿಗೆ ಸಹಾಯ ಮಾಡುತ್ತಾ ದುಷ್ಟ ಶಕ್ಷಣ ಮತ್ತು ಶಿಷ್ಟ ರಕ್ಷಣ ಮಾಡುತ್ತಾ ಆದರ್ಶ ಜೀವನದ ಮಾರ್ಗವನ್ನು ಪ್ರಪಂಚಕ್ಕೆ ತೋರಿಸಿದವನು. 4 ಯುಗಗಳಲ್ಲಿ ತೇತಾಯುಗದಲ್ಲಿ ಜನಿಸಿದ ರಾಮನು ಕಲಿಯುಗದ ಜನರಿಗೆ ಆದರ್ಶವನ್ನು ತೋರಿಸಿ ದೇವರಾಗಿ ಮನುಷ್ಯನನ್ನು ಉದ್ಧರಿಸಿದ ಶ್ರೀರಾಮಚಂದ್ರನ ನಾಮದ ಮಹಿಮೆ ಬಹಳವೇ ಇದೆ.
ಬೇಡನಾಗಿದ್ದ ವಾಲ್ಮೀಕಿ ನಾರದರ ಬೋಧನೆಯಿಂದ ರಾಮನಾಮ ಜಪವನ್ನು ಮಾಡುತ್ತ ರಾಮನಾಮದ ಮಹಿಮೆಯ ಬಲದಿಂದಲೇ ಮಹರ್ಷಿಯಾದ ಎಂದು ಹೇಳಲಾಗುತ್ತದೆ. ಭಾರತೀಯರಲ್ಲಿ ನಾಮ ಸಂಕೀರ್ತನೆಗೆ ಬಹಳ ದೊಡ್ಡ ಸ್ಥಾನವನ್ನು ಕೊಡಲಾಗಿದೆ. ಯಾವುದೇ ನಿಯಮಿತವಾದ ಜಪಾನುಕ್ರಮವನ್ನು ಅನುಸರಿಸದೇ ಯಾವುದೇ ಸ್ಥಳದ ಶುದ್ಧಿಯನ್ನು ಪಾಲಿಸದೇ ಹಾಸಿಗೆಯ ಮೇಲೆ ಮಲಗಿದ್ದರೂ ಮಾಡ ಬಹುದಾದ ಜಪ ಒಂದಿದೆ ಎಂದರೆ ಅದು ಕೇವಲ ಶ್ರೀರಾಮನಾಮ ಜಪವಾಗಿದೆ. “ಶ್ರೀರಾಮ ಜಯರಾಮ ಜಯ ಜಯ ರಾಮ” ಎಂಬುದು ರಾಮ ತಾರಕ ಮಂತ್ರ. ಸೀತಾಮಾತೆಯನ್ನು ಹುಡುಕಲು ಹೊರಟ ಹನುಮಂತನು ಅಶೋಕವನದ ಮರದ ಮೇಲೆ ಕುಳಿತು ಸೀತಾದೇವಿಗೆ ತಾನು ರಾಮ ಭಕ್ತನೆಂದು ತಿಳಿಸಲು ರಾಮನಾಮ ಜಪವನ್ನೇ ಮಾಡುತ್ತಾನೆ. ವಿಭೀಷಣ ಧರ್ಮ ಪರಾಯಣ ಸಾತ್ವಿಕ ಎಂದು ಹನುಮಂತನು ಅವನ ರಾಮನಾಮ ಜಪದ ಮೂಲಕವೇ ತಿಳಿಯುತ್ತಾನೆ. ಇದು ರಾಮಾಯಣ ಕಾಲದ ರಾಮನಾಮ ಜಪದ ಮಹತ್ವವಾಗಿದೆ. ಇಷ್ಟೇ ಏಕೆ ರಾವಣನು ಸೀತೆಯನ್ನು ಅಪಹರಿಸಿದಾಗ ರೂಪ ಬದಲಿಸಿದಂತೆ ಅವಳನ್ನು ಒಲಿಸಿಕೊಳ್ಳಲು ರಾಮನ ವೇಷವನ್ನು ಧರಿಸಿ ಪ್ರಯತ್ನ ಮಾಡುವಂತೆ ಅವನ ಅಸುರ ಬಂಧುಗಳು ಸಲಹೆ ನೀಡಿದಾಗ ರಾವಣನು ಹೇಳುತ್ತಾನೆ, ರಾಮನ ವೇಷವನ್ನು ಧರಿಸಿದಾಗ ನನ್ನ ಮನದಲ್ಲಿ ಮನೋವಿಕಾರಗಳು ಆಗದೇ ಪರಸ್ತ್ರೀಯರನ್ನು ನೋಡಬಾರದೆಂಬ ಎಚ್ಚರಿಕೆ ಮನಸ್ಸಿಗೆ ಬರುತ್ತದೆ ಎನ್ನುತ್ತಾನೆ. ಇಂತಹ ಮಹಿಮೆ ರಾಮನಲ್ಲಿದೆ.
ಪದ್ಮ ಪುರಾಣದಲ್ಲಿ ಶಿವನು ಪಾರ್ವತಿಗೆ ರಾಮನಾಮದ ಮಹಿಮೆಯ ಬೋಧನೆಯನ್ನು ಮಾಡುತ್ತಾನೆ. ನೀನೆ ಪ್ರಪಂಚದ ಒಡೆಯನಾಗಿದ್ದೂ ಏಕೆ ರಾಮನಾಮ ಜಪ ಮಾಡುತ್ತಿರುವೀ ಎಂದು ಪಾರ್ವತಿ ದೇವಿಯು ಕೇಳಿದಾಗ ಈಶ್ವರನು ನಾನು ವಿಷ್ಣುವಿನ ಆಜ್ಞೆಯಂತೆ ವಿಷ್ಣು ಸಹಸ್ರನಾಮವನ್ನು ಜಪಿಸುತ್ತಿರುವೆ. ರಾಮನಾಮ ಜಪ ಮಾಡುವುದರಿಂದ ವೈಷ್ಣವ ವ್ರತ ಆಚರಿಸಿದಂತೆ ಎಂದು ಹೇಳಿ, ರುದ್ರದೇವರು ಪಾರ್ವತಿ ದೇವಿಗೆ ವಿಷ್ಣು ಸಹಸ್ರನಾಮದ ಉಪದೇಶ ಮಾಡುತ್ತಾರೆ. ಆಗ ಈ ವ್ರವನ್ನು ಮಾಡುತ್ತಿರುವಾಗ ನಿತ್ಯವೂ ಊಟಕ್ಕೆ ಮೊದಲು ವಿಷ್ಣು ಸಹಸ್ರನಾಮ ಪರಾಯಣ ಮಾಡದೇ ಊಟ ಮಾಡುತ್ತಿರುವುದಿಲ್ಲ. ಏಕಾದಶೀಯ ಮಾರನೆ ದಿನ ಮುಂಜಾನೆ ದ್ವಾದಶೀಯಂದು ಶಿವನು ಪಾರ್ವತಿಯನ್ನು ಊಟಕ್ಕೆ ಕರೆದಾಗ ವಿಷ್ಣು ಸಹಸ್ರನಾದ ಪಾರಾಯಣವಾಗದ ಕಾರಣ ತಾನು ಊಟ ಮಾಡುವುದಿಲ್ಲ ಎಂದು ಗೌರಿಯು ಹೇಳಿದಾಗ ರುದ್ರದೇವರು “ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ಪುಲ್ಯಂ ರಾಮನಾಮ ವರಾನನೇ” ಎಂದು ಹೇಳಿ ರಾಮನಾಮ ಜಪವು ವಿಷ್ಣು ಸಹಸ್ರನಾಮ ಜಪದ ಫಲವನ್ನೇ ನೀಡುತ್ತದೆ ಎಂದು ಹೇಳುತ್ತಾರೆ. ರಾಮ ನಾಮ ಜಪವು “ಲೌಕಿರಾಃ, ವೈದಿಕಾಃ ಶಬ್ದಾಃ ಯೇ ಕೇಚಿತ್ಸಂತಿ ಪಾರ್ವತಿ| ನಾಮಾನಿ ರಾಮಚಂದ್ರಸ್ಯ ಸಹಸ್ರಂ ಥೇಷು ಚಾದಿಕಂ|| ಜಪತಃ ಸರ್ವಮಂತ್ರಾಶ್ಚ ಸರ್ವ ವೇದಾಂಶ್ಚ ಪಾರ್ವತಿ| ತಸ್ಮಾತ್ ಕೋಟಿ ಗುಣ ಪುಣ್ಯಂ ರಾಮನಾಮೈವ ಲಭ್ಯತೇ|| ಎಂದು ಹೇಳುತ್ತಾರೆ. ದಾಸರು ಕೂಡ ರಾಮಮಂತ್ರವ ಜಪಿಸೋ ಹೇ ಮನುಜಾ , ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಎಂದಿದ್ದಾರೆ. ರಾಮನಾಮ ಜಪದ ಮಹಿಮೆಯನ್ನು ಸಾರುವ ಅನೇಕ ಅನುಭವದ ಕಥೆಗಳು ಇವೆ. ತ್ರೇತಾಯುಗದಿಂದಲೂ ಕಲಿಯುಗದವರೆಗೂ ಅನೇಕ ಪವಾಡಗಳು ರಾಮನಾಮದಿಂದ ಜಪ ಮತ್ತು ರಾಮನ ಆರಾಧನೆಯ ಕಥೆಗಳನ್ನು ಕೇಳುತ್ತೇವೆ.
ರಾಮನಾಮ ಜಪದಿಂದ ಮನಸ್ಸಿನ ಆತಂಕ, ದುಃಖ ಮತ್ತು ಖಿನ್ನತೆ ದೂರವಾಗಿ ಶಾಂತಿ, ನೆಮ್ಮದಿ ಜೊತೆಗೆ ದೈಹಿಕ ಆರೋಗ್ಯವನ್ನು ಕೂಡ ನೀಡುತ್ತದೆ. ರಾಮನಾಮ ಜಪವು ದೇಹದಲ್ಲಿ ವಿಶೇಷವಾದ ಬಲವನ್ನು ನೀಡುತ್ತದೆ ನರಗಳಿಗೆ ಪ್ರಚೋದನೆ ನೀಡಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಪ್ರೇರೇಪಿಸುತ್ತದೆ. ರಾಮನಾಮ ಜಪದಿಂದ ಮನಸ್ಸು ಸದೃಢವಾಗಿ ಸ್ವತಃ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ಆತ್ಮಬಲ ದೊರೆಯುತ್ತದೆ. ಮನುಷ್ಯನ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊಡೆದು ರಾಮನ ಜೀವನ ಮತ್ತು ವ್ಯಕ್ತಿತ್ವದಿಂದ ಪ್ರೇರಿತರಾಗಿ ಉತ್ತಮ ಗುಣಗಳ ಉಪಾಸನೆ ಮಾಡುವ ಭಕ್ತಿ ಭಾವವೂ ಮನದಲ್ಲಿ ಮೂಡುತ್ತದೆ. ಹೀಗಾಗಿ ನಿರಂತರ ರಾಮನಾಮ ಜಪವನ್ನು ಮಾಡುವುದರಿಂದ ಮಾನಸಿಕ ಒತ್ತಡ ಚಿಂತೆಗಳು ಪರಿಹಾರವಾಗಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ.

ಮಾಧುರಿ ದೇಶಪಾಂಡೆ, ಬೆಂಗಳೂರು








