- ಭಕ್ತರ ಸಾಗರದ ನಡುವೆ ನಂಜುಂಡನ ಅದ್ದೂರಿ ತೇರು
ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ಮುಂಜಾನೆಯೇ ನಂಜುಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.
ನಂಜನಗೂಡು ದೇವಾಲಯದ ಮುಂದೆ ನೆರೆದಿದ್ದ ಅಪಾರ ಭಕ್ತರ ಜಯಘೋಷಗಳೊಂದಿಗೆ ಶ್ರೀಕಂಠೇಶ್ವರ ಸ್ವಾಮಿ ಮಹಾರಥೋತ್ಸವ ಇಂದು ಬೆಳಿಗ್ಗೆ 6.34ಕ್ಕೆ ಅದ್ದೂರಿಯಾಗಿ ನೆರವೇರಿತು. ನಂಜನಗೂಡು ದೊಡ್ಡಜಾತ್ರೆಯ ವೈಭವಕ್ಕೆ ಕಳಶಪ್ರಾಯವಾದ ನಂಜುಡನ ತೇರು ರಾಜಠೀವಿಯ ಸಾಗಿತು. ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ನಂಜುಡನಿಗೆ ಜಯಕಾರ ಘೋಷಣೆ ಕೂಗಿದರು.
ಇರುವೆಗಳಂತೆ ದೇಗುಲದ ಅಂಗಳವನ್ನು ತುಂಬಿದ್ದ ಜನರು ರಥದ ದಾರಿಯನ್ನೇ ಅನುಸರಿಸಿದರು. ರಥ ಬೀದಿಯಲ್ಲಿ ತೇರಿನ ಹೆಬ್ಬಾವಿನ ಗಾತ್ರದ ಮಿಣಿಯನ್ನು ಎಳೆದು ಹರಕೆ ತೀರಿಸಿದರು. ಬಂದನಾಪ್ಪ ಬಂದಾನೊ… ನಂಜುಡಪ್ಪ ಬಂದಾನೋ ಎನ್ನುತ್ತ ದೊಡ್ಡರಥವನ್ನು ಎಳೆದರು. ಭಕ್ತಸಾಗರ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿತು. ಚಾಮುಂಡೇಶ್ವರಿ ತಾಯಿಗೂ ಜಯಕಾರ ಹಾಕಿದರು.

ಇಂದು ಬೆಳಿಗ್ಗೆ 6 ಗಂಟೆಗೆ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಶ್ರೀ ಮನ್ನಹಾಗೌತಮ ರಥರೋಹಣ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗಕ್ಕೆ ತಂದ ನಂತರ ಗೌತಮ ರಥಕ್ಕೆ ದೇವರನ್ನು ಪ್ರತಿಷ್ಠಾಪಿಸಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ ರಥದ ಚಕ್ರಕ್ಕೆ ಈಡುಗಾಯಿ ಒಡೆದದರು. ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಹಸಿರು ಬಾವುಟ ತೋರಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಗಾರಿಯ ಸದ್ದು ಮೇಳೈಸುತ್ತಿದ್ದಂತೆ ಬೆಳಿಗ್ಗೆ 6.34ಕ್ಕೆ ರಥವು ಚಲಿಸಿತು.
ಶ್ರೀಕಂಠೇಶ್ವರಸ್ವಾಮಿಯ 110 ಟನ್ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು 1.5 ಕಿ.ಮೀ. ದೂರದ ರಥಬೀದಿಯಲ್ಲಿ ಸಾಗಿದವು. 5 ರಥಗಳನ್ನು ವಿವಿಧ ಬಣ್ಣದ ವಸ್ತ್ರ, ಬಾವುಟಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. ದೊಡ್ಡರಥವನ್ನು ಎಳೆಯಲು 100 ಮೀಟರ್ ಉದ್ದದ ಎರಡು ಬೃಹತ್ ಹಗ್ಗಗಳನ್ನು ಬಳಕೆ ಮಾಡಲಾಯಿತು. ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಬಳಕೆಯಲ್ಲಿತ್ತು. ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿತ್ತು.








