ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಗಂಭೀರ ಎಚ್ಚರಿಕೆ ನೀಡಿದ್ದು, “ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಬಹುದು” ಎಂದು ಹೇಳಿದ್ದಾರೆ.
ಇರಾನ್‌ಗೆ ನೀಡಿದ್ದ 48 ಗಂಟೆಗಳ ಗಡುವು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರು ಈ ಕಠಿಣ ಸಂದೇಶವನ್ನು ತಮ್ಮ ‘ಟ್ರೂತ್’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ, “ಇಡೀ ನಾಗರಿಕತೆ ಇಂದು ರಾತ್ರಿ ಅಂತ್ಯವಾಗಬಹುದು. ಅದು ಮತ್ತೆಂದೂ ಮರಳಿ ಬರುವುದಿಲ್ಲ. ಇದು ಸಂಭವಿಸಬಾರದೆಂದು ನಾನು ಬಯಸುತ್ತೇನೆ, ಆದರೆ ಸಂಭವಿಸುವ ಸಾಧ್ಯತೆ ಇದೆ. ನಾವು ಸಂಪೂರ್ಣ ಆಡಳಿತ ಬದಲಾವಣೆಯನ್ನು ಬಯಸುತ್ತೇವೆ. ಬಹುಶಃ ಏನಾದರೂ ಅಚ್ಚರಿಯ ಬದಲಾವಣೆ ಸಂಭವಿಸಬಹುದು. ಇದು ಜಗತ್ತಿನ ದೀರ್ಘ ಇತಿಹಾಸದ ಪ್ರಮುಖ ಕ್ಷಣವಾಗಲಿದೆ” ಎಂದು ತಿಳಿಸಿದ್ದಾರೆ.
ಇನ್ನಷ್ಟು, “47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಕೊನೆಗೊಳ್ಳಲಿದೆ. ದೇವರು ಇರಾನ್‌ನ ಜನರನ್ನು ಆಶೀರ್ವದಿಸಲಿ” ಎಂದು ಅವರು ಬರೆದಿದ್ದಾರೆ.ಇದನ್ನು ಓದಿ –ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳ ದುರ್ಮರಣ
ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಟ್ರಂಪ್ ಇರಾನ್‌ಗೆ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆಯವರೆಗೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 6:30) ಗಡುವು ನೀಡಿದ್ದರು. ಈ ಗಡುವು ಮೀರುತ್ತಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.








