ಬೆಂಗಳೂರು: ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಕೆಎಸ್‌ಸಿಎ ಸದಸ್ಯ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿಬಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಅಕ್ರಮ ಟಿಕೆಟ್ ಮಾರಾಟ ಜಾಲ ಬಹಿರಂಗವಾಗಿದೆ.
ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂದ್ಯಗಳಿಗೆ ಸಂಬಂಧಿಸಿದಂತೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ₹15,000ರಿಂದ ₹19,000ವರೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಲಕ್ಷ್ಮಿ ಕ್ಯಾಟರ್ಸ್‌ನ ಕ್ಯಾಪ್ಟನ್ ಚಂದ್ರಶೇಖರ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಚಂದ್ರಶೇಖರ್, ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ಜೊತೆ ಸೇರಿ ಟಿಕೆಟ್‌ಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಎರಡು ಖಾಸಗಿ ಕಂಪನಿಗಳಿಂದ ಆನ್‌ಲೈನ್ ಮೂಲಕ ಟಿಕೆಟ್ ಪಡೆದು, ಅವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಮೊದಲ ಪಂದ್ಯದಲ್ಲೇ ಆರೋಪಿಗಳು 81 ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡಿದ್ದು, ಐಪಿಎಲ್‌ನಲ್ಲಿ ಎಲ್‌ಎಸ್‌ಜಿ vs ಆರ್‌ಸಿಬಿ ಪಂದ್ಯಕ್ಕೆ ಸುಮಾರು 100 ಟಿಕೆಟ್ ಮಾರಾಟಕ್ಕೆ ಸಿದ್ಧವಾಗಿದ್ದ ವೇಳೆ ಸಿಸಿಬಿ ಸ್ಟಿಂಗ್ ಆಪರೇಷನ್ ನಡೆಸಿ ಚಂದ್ರಶೇಖರ್‌ನನ್ನು ಬಂಧಿಸಿದೆ.ಇದನ್ನು ಓದಿ –ಬೆಂಗಳೂರು ತಲುಪಿದ H5N1 ಹಕ್ಕಿ ಜ್ವರ
ಈ ಪ್ರಕರಣದಲ್ಲಿ ಚಂದ್ರಶೇಖರ್, ಗಣೇಶ್ ಹರಿಕೇಶ್ ಹಾಗೂ ಸಂಬಂಧಿತ ಎರಡು ಖಾಸಗಿ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿಯಾದ ಗಣೇಶ್ ಹರಿಕೇಶ್ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.








