- ಹೆಸರಘಟ್ಟ ಪೌಲ್ಟ್ರಿ ಫಾರಂ ಸೀಲ್, ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳು
ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಡೆದ ಪರೀಕ್ಷೆಯಲ್ಲಿ ಕೋಳಿಗಳಲ್ಲಿ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
ಈ ಪೌಲ್ಟ್ರಿ ಫಾರಂನಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ನಡೆಯುತ್ತಿದ್ದ ಹಿನ್ನೆಲೆ, ಸೋಂಕು ವ್ಯಾಪಿಸುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗಾ ವಹಿಸಲಾಗಿದ್ದು, ಕೋಳಿ ಸಾಗಣೆ ಮತ್ತು ಮಾರಾಟದ ಮೇಲೂ ನಿಯಂತ್ರಣ ಹೇರಲಾಗಿದೆ.
ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲಾಗುವ ಈ ಬರ್ಡ್ ಫ್ಲೂ ವೈರಸ್ ಪಕ್ಷಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಾದರೂ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಹರಡುವ ಸಾಧ್ಯತೆಯೂ ಇದೆ. ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ವೈದ್ಯಾಧಿಕಾರಿಗಳು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಸುತ್ತಮುತ್ತಲಿನ ಕೋಳಿ ಶೆಡ್‌ಗಳಲ್ಲಿ ತಪಾಸಣೆ ನಡೆಸುವಂತೆ ಪಶುವೈದ್ಯ ಇಲಾಖೆಗೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಎಚ್ಚರಿಕಾ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ.
ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಮಾಂಸ ಮಾರಾಟದ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಯುತ್ತಿದೆ.ಇದನ್ನು ಓದಿ –ಬೆಂಗಳೂರು–ಪುಣೆ ನಡುವಿನ ‘ವಂದೇ ಭಾರತ್’ ಸ್ಲೀಪರ್
ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಬೇಕು. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಮಾತ್ರ ಸೇವಿಸಬೇಕು. ಹಸಿ ಮೊಟ್ಟೆ ಅಥವಾ ಅರ್ಧ ಬೇಯಿಸಿದ ಮಾಂಸವನ್ನು ತಿನ್ನಬಾರದು. ಕೈಗಳನ್ನು ನಿಯಮಿತವಾಗಿ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು.








