- ಡ್ರೆಸ್ ಕೋಡ್ ಸೇರಿ ಕಠಿಣ ನಿಯಮಗಳು ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 23 ಹಾಗೂ 24ರಂದು ಸಿಇಟಿ (CET) ಪರೀಕ್ಷೆ ನಡೆಯಲಿದ್ದು, ಸುಮಾರು 3.30 ಲಕ್ಷ ವಿದ್ಯಾರ್ಥಿಗಳು 750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರ ಡ್ರೆಸ್ ಕೋಡ್ ಸೇರಿದಂತೆ ಹಲವು ನಿಯಮಗಳನ್ನು ಕಡ್ಡಾಯಗೊಳಿಸಿದೆ.
ಡ್ರೆಸ್ ಕೋಡ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಈ ಕುರಿತು ಪರೀಕ್ಷಾ ಕೇಂದ್ರಗಳ ಹಿರಿಯ ಪ್ರಾಧ್ಯಾಪಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
ಪರೀಕ್ಷಾ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ಅರ್ಧ ತೋಳಿನ ಶರ್ಟ್ ಅಥವಾ ಟಿ-ಶರ್ಟ್ ಧರಿಸುವುದು ಸೂಕ್ತ. ಉದ್ದ ತೋಳಿನ ಅಂಗಿಗಳು ಅಥವಾ ದೊಡ್ಡ ಬಟನ್ ಇರುವ ಬಟ್ಟೆಗಳಿಗೆ ಅವಕಾಶವಿಲ್ಲ. ವಿದ್ಯಾರ್ಥಿನಿಯರು ಸರಳ ಉಡುಪು ಧರಿಸಬೇಕು; ಕಿವಿಯೋಲೆ, ಸರ ಮುಂತಾದ ಆಭರಣಗಳನ್ನು ಧರಿಸದಿರುವುದು ಉತ್ತಮ.
ಪರೀಕ್ಷಾ ಕೊಠಡಿಯಲ್ಲಿ ಶೂ ಧರಿಸಲು ಅನುಮತಿ ಇಲ್ಲ. ಅಭ್ಯರ್ಥಿಗಳು ಸರಳ ಚಪ್ಪಲಿ ಧರಿಸುವುದು ಕಡ್ಡಾಯ. ಜೊತೆಗೆ, ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಹಾಲ್ ಟಿಕೆಟ್ ಮತ್ತು ಆಧಾರ್ ಕಾರ್ಡ್ ಅಥವಾ ಕಾಲೇಜು ಐಡಿ ಸೇರಿದಂತೆ ಮಾನ್ಯ ಗುರುತಿನ ಚೀಟಿ ತರಬೇಕು.
ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಕನಿಷ್ಠ ಒಂದು ಗಂಟೆ ಮೊದಲು ಕೇಂದ್ರಕ್ಕೆ ಆಗಮಿಸಬೇಕು. ಪರೀಕ್ಷೆ ಆರಂಭವಾದ ಬಳಿಕ ಯಾರಿಗೂ ಪ್ರವೇಶವಿರುವುದಿಲ್ಲ. ಒಎಂಆರ್ ಶೀಟ್ ಭರ್ತಿ ಮಾಡುವಾಗ ಕೇವಲ ಕಪ್ಪು ಅಥವಾ ನೀಲಿ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸಬೇಕು.ಇದನ್ನು ಓದಿ –ಶಾಂತಿ ಒಪ್ಪಂದದವರೆಗೆ ದಿಗ್ಬಂಧನ ತೆರವು ಇಲ್ಲ: ಟ್ರಂಪ್
ಈ ಬಾರಿ ದಾಖಲೆ ಪ್ರಮಾಣದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿ ಯೋಜನೆ ಮಾಡಿಕೊಂಡು ಸಮಯಕ್ಕಿಂತ ಮೊದಲೇ ಕೇಂದ್ರ ತಲುಪುವಂತೆ ಸೂಚಿಸಲಾಗಿದೆ.








