ವಾಷಿಂಗ್ಟನ್: ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಅಮೆರಿಕಾ ತನ್ನ ದಿಗ್ಬಂಧನವನ್ನು ತೆರವುಗೊಳಿಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ದಿಗ್ಬಂಧನ ಇರಾನ್‌ಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡುತ್ತಿದ್ದು, ಒಪ್ಪಂದ ಅಂತಿಮವಾಗುವವರೆಗೂ ಅದನ್ನು ಮುಂದುವರಿಸಲಾಗುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಇರಾನ್ ಪ್ರತಿದಿನ ಸುಮಾರು 500 ಮಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದ್ದು, ಇದು ದೀರ್ಘಾವಧಿಯಲ್ಲಿ ಸಹನೀಯವಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕಾ ಮತ್ತು ಇರಾನ್ ಎರಡೂ ಪರಸ್ಪರ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೂ ಮತ್ತೆ ಅಡಚಣೆ ಉಂಟಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಅಮೆರಿಕಾ ಸರ್ಕಾರದ ಮೇಲೆ ಇರಾನ್‌ಗೆ ವಿಶ್ವಾಸ ಇಲ್ಲ ಎಂದು ಹೇಳಿದ್ದಾರೆ. “ಬಲವಂತಕ್ಕೆ ಇರಾನಿಯನ್ನರು ಮಣಿಯುವುದಿಲ್ಲ. ಬದ್ಧತೆಗಳನ್ನು ಗೌರವಿಸುವುದು ಮಾತ್ರ ಅರ್ಥಪೂರ್ಣ ಸಂವಾದಕ್ಕೆ ಮೂಲ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.ಇದನ್ನು ಓದಿ –ಇಂದು ರಾಜ್ಯದಲ್ಲಿ ಹಲವೆಡೆ ಮಳೆ ಸಾಧ್ಯತೆ
ಇದಲ್ಲದೆ, ಅಮೆರಿಕದ ನಿಯೋಗ ಪಾಕಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆ, ಮುಂದಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸಬೇಕೇ ಇಲ್ಲವೇ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇರಾನ್ ತಿಳಿಸಿದೆ.








