ಬೆಂಗಳೂರು, ಏಪ್ರಿಲ್ 22: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷದ ಬಳಿಕ ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಈ ಮೂಲಕ ರನ್ಯಾ ರಾವ್ ಅವರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದ್ದು, ಒಂದು ವರ್ಷ ಜೈಲು ವಾಸದ ಬಳಿಕ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಲಿದ್ದಾರೆ.
ಚಿನ್ನ ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ರನ್ಯಾ ರಾವ್ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದರು. ಈ ಹಿಂದೆ ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ, ಕಾಫೆಪೋಸಾ ಕಾಯ್ದೆಯಡಿ ಬಂಧನ ಆದೇಶ ಜಾರಿಯಲ್ಲಿದ್ದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ಸುಪ್ರೀಂ ಕೋರ್ಟ್, ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯಡಿ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಹೊರಡಿಸಿದ್ದ ಬಂಧನ ಆದೇಶವನ್ನು ಮಾನ್ಯಗೊಳಿಸಿತ್ತು. ಆದರೂ ಒಂದು ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆ ಇದೀಗ ಜಾಮೀನು ದೊರೆತಿದೆ.
2025ರ ಮಾರ್ಚ್ 3ರಂದು ದುಬೈಯಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಡಿಆರ್‌ಐ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ 14.213 ಕೆಜಿ ಚಿನ್ನ ಪತ್ತೆಯಾಗಿದ್ದು, ಸುಮಾರು ₹102 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.ಇದನ್ನು ಓದಿ –ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇನ್‌ಸ್ಪೆಕ್ಟರ್ ವಶಕ್ಕೆ
ಬಳಿಕ ಈ ಪ್ರಕರಣ ಹಲವು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈಗ ಒಂದು ವರ್ಷದ ಬಳಿಕ ರನ್ಯಾ ರಾವ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.








