ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಕೀನ್ಯಾದ ಓಟಗಾರ ಸೆಬಾಸ್ಟಿಯನ್ ಸಾವೆ ಸಾಧಿಸಿ ತೋರಿಸಿದ್ದಾರೆ. ಲಂಡನ್ ಮ್ಯಾರಾಥಾನ್‌ನ 42.195 ಕಿಲೋಮೀಟರ್ ದೂರವನ್ನು ಕೇವಲ 1:59:30 ಗಂಟೆಯಲ್ಲಿ ಪೂರೈಸುವ ಮೂಲಕ ಅವರು ಮನುಷ್ಯನ ದೈಹಿಕ ಸಾಮರ್ಥ್ಯದ ಬಗ್ಗೆ ಇದ್ದ ಎಲ್ಲಾ ಹಳೆಯ ಕಲ್ಪನೆಗಳನ್ನು ಸುಳ್ಳು ಮಾಡಿದ್ದಾರೆ.
ದಶಕಗಳಿಂದ ಮ್ಯಾರಾಥಾನ್ ಅನ್ನು ಎರಡು ಗಂಟೆಯೊಳಗೆ ಮುಗಿಸುವುದು ಅಸಾಧ್ಯ ಎಂಬ ನಂಬಿಕೆಯಿತ್ತು. ಆದರೆ ಸಾವೆ ಅವರ ದೃಢ ಸಂಕಲ್ಪ ಈ ಮಿತಿಯನ್ನು ದಾಟುವಂತೆ ಮಾಡಿತು.
ಯುವಜನತೆಗೆ ಇವರ ಸಾಧನೆ ನೀಡುವ ಮೊದಲ ಪಾಠವೆಂದರೆ, ನಮ್ಮ ಮನಸ್ಸು ಒಪ್ಪುವವರೆಗೂ ಯಾವುದೇ ಗುರಿ ಅಸಾಧ್ಯವಲ್ಲ. ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಹಠವಿದ್ದರೆ ಇತಿಹಾಸ ನಿರ್ಮಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ.
ಸಾವೆ ಅವರ ಯಶಸ್ಸಿನ ಹಿಂದೆ ವರ್ಷಗಳ ಕಠಿಣ ತಪಸ್ಸಿದೆ. ತಿಂಗಳಿಗೆ ಸುಮಾರು 800 ಕಿ.ಮೀ ಓಡುವುದು ಮತ್ತು ಪ್ರತಿದಿನ ಮುಂಜಾನೆ 6 ಗಂಟೆಯಿಂದಲೇ ಅಭ್ಯಾಸ ಆರಂಭಿಸುವುದು ಅವರ ಶಿಸ್ತಿಗೆ ಸಾಕ್ಷಿ. ಇಂದಿನ ಯುವಕರು ಇನ್ಸ್ಟಂಟ್ ಗೆಲುವಿನ ಬೆನ್ನತ್ತದೆ, ಸಾವೆ ಅವರಂತೆ ಶ್ರಮವನ್ನು ಪ್ರೀತಿಸಬೇಕು. ಬೆವರು ಸುರಿಸಲು ಸಿದ್ಧವಿರುವವನಿಗೆ ಮಾತ್ರ ವಿಜಯಮಾಲೆ ಒಲಿಯುತ್ತದೆ ಎಂಬುದು ಇಲ್ಲಿನ ಸತ್ಯ.
ಬಡತನ ಅಥವಾ ಸೌಲಭ್ಯಗಳ ಕೊರತೆ ಸಾಧನೆಗೆ ಅಡ್ಡಿಯಲ್ಲ. ಅಚಲವಾದ ಪರಿಶ್ರಮವಿದ್ದರೆ ಜಗತ್ತೇ ನಿಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು. ನಥಿಂಗ್ ಈಸ್ ಇಂಪಾಸಿಬಲ್ ಎಂಬ ಮಂತ್ರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಸೋಲು ಎಂಬುದು ಕೇವಲ ಒಂದು ತಾತ್ಕಾಲಿಕ ಘಟ್ಟವಾಗಿ ಉಳಿಯುತ್ತದೆ. ನಿಮ್ಮ ಗುರಿಯತ್ತ ದೃಷ್ಟಿಯಿರಲಿ, ಕಾಯಕದಲ್ಲಿ ಪ್ರಾಮಾಣಿಕತೆಯಿರಲಿ, ಆಗ ಯಶಸ್ಸು ನಿಮ್ಮ ಹುಡುಕಿಕೊಂಡು ಬರುತ್ತದೆ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.








