- ದುಷ್ಟ ಹಿರಣ್ಯಕಶಿಪುವಿನ ಸಂಹಾರಕ್ಕೆ ನರಸಿಂಹ ಅವತಾರ
ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವೇ ನರಸಿಂಹ ಅವತಾರ. ವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಪುರಾಣಗಳ ಪ್ರಕಾರ ನರಸಿಂಹ ಅವತಾರವು ಬಲು ಮುಖ್ಯ ಮತ್ತು ವೈಶಿಷ್ಟ್ಯವಾದುದು. ವಿಷ್ಣುವಿನ ಅನೇಕ ರೂಪಗಳಲ್ಲಿ ನರಸಿಂಹ ರೂಪವು ಅತಿ ವಿಶಿಷ್ಟವಾದ ಹಾಗೂ ಅತ್ಯುಗ್ರವಾದ ರೂಪ.
ನೃಸಿಂಹಾತಾರದಲ್ಲಿ ಉಳಿದ ಎಲ್ಲಾ ಅವತಾರಗಳಂತೆ ದುಷ್ಟ ಶಿಕ್ಷಣ ಶಿಷ್ಟ ಪರಿಪಾಲನಗಳ ಜೊತೆಗೆ ಭಗವಂತನು ಅಸಾಧಾರಣವಾದ ತನ್ನ ನೈಜ ವಿಭೂತಿಯನ್ನು ಭಗವತ್ ತತ್ತ್ವವನ್ನೂ ಸ್ಪಷ್ಟವಾಗಿ ಪ್ರಕಟಪಡಿಸಿದ್ದಾನೆ. ಅನಿಷ್ಟಗಳನ್ನು ನಿವೃತ್ತಿ ಮಾಡುವ ಮೂಲಕ ಇಷ್ಟ ಪ್ರಾಪ್ತಿಯನ್ನು ಮಾಡಿ ದ್ವಿದಳ ಫಲವನ್ನು ಕೊಡುವ ಪರಮದೈವ ನರಸಿಂಹದೇವ. ಆದ್ದರಿಂದಲೇ ಅವನನ್ನು ಪುರಾಣ ಶಾಸ್ತ್ರಗಳಲ್ಲಿ ಹಾಗೂ ಹರಿದಾಸರ ವಾಣಿಯಲ್ಲಿ ಭಯನಿವಾರಣ ಎಂದು ಸಂಬೋಧಿಸಿದ್ದಾರೆ. ಎಲ್ಲರ ಪಾಪಗಳೆಂಬ ಅಂಧಕಾರಕ್ಕೆ ಸೂರ್ಯನಂತಿರುವವನು ನರಸಿಂಹದೇವ.
ಈ ನರಸಿಂಹ ಎಂಬ ಶಬ್ದದಲ್ಲಿ ಅನೇಕ ಸ್ವಾರಸ್ಯಗಳು ಅಡಗಿವೆ. ನರ(ಮನುಷ್ಯ)ಸಿಂಹ(ಮೃಗ) ಎರಡೂ ಆಕಾರಗಳನ್ನು ಒಂದೇ ದೇಹದಲ್ಲಿ ಉಳ್ಳವನೇ ‘ನರಸಿಂಹ’. ಅರ ಎಂದರೆ ದೋಷ. ನಾರ ಎಂದರೆ ದೋಷವೇ ಇಲ್ಲದವ. ಅಂತಹ ದೋಷಮುಕ್ತ ಸಿಂಹ ನರಸಿಂಹ. “ನಾರಂ” ಎಂದರೆ ವೈಕುಂಠ ಅಲ್ಲಿಗೆ ಕರೆದೊಯ್ಯುವವ. ನರಸಿಂಹ ರೂಪದಿಂದಲೇ ಎಲ್ಲರಿಗೂ ಮೋಕ್ಷವನ್ನು ಕೊಡುವವ ಎಂದು ಶಾಸ್ತ್ರಗಳು ಸಾರುತ್ತವೆ.
ಇಂದು ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ. ಇದಕ್ಕೂ ಒಂದು ಐತಿಹ್ಯವಿದೆ.

ಭೂಪಾಲಕನಾದ ಶ್ರೀವಿಷ್ಣು ತನ್ನ ಮಡದಿ ಶ್ರೀಲಕ್ಷ್ಮೀಯೊಂದಿಗೆ ಏಕಾಂತದಲ್ಲಿ ಇರುತ್ತಾನೆ. ಇದೇ ಸಂದರ್ಭ ಋಷಿಗಳ ಆಗಮನವಾಗುತ್ತದೆ. ಆಗ ದ್ವಾರಪಾಲಕರಾದ ಜಯ-ವಿಜಯರು ವೈಕುಂಠ ಪ್ರವೇಶಿಸಲು ಋಷಿಗಳನ್ನು ತಡೆಯುತ್ತಾರೆ. ಪರಿ ಪರಿಯಾಗಿ ಹೇಳಿ ಅವರಿಗೆ ವೈಕುಂಠ ಪತಿ ಶ್ರೀ ವಿಷ್ಣುವಿನ ದರ್ಶನ ಮಾಡದಂತೆ ತಡೆಯುತ್ತಾರೆ. ಇದರಿಂದ ಕುಪಿತಗೊಂಡ ಋಷಿಗಳು ಭೂಲೋಕದಲ್ಲಿ ಜನಿಸುವಂತೆ ಜಯ-ವಿಜಯರಿಗೆ ಶಾಪ ನೀಡುತ್ತಾರೆ. ಇದೇ ಸಂದರ್ಭ ಋಪಿಗಳು ತಮಗೆ ನೀಡಿದ ಶಾಪದ ಬಗ್ಗೆ ದ್ವಾರಪಾಲಕರಾದ ಜಯ-ವಿಜಯರು ವಿಷ್ಣುವಿಗೆ ತಿಳಿಸುತ್ತಾರೆ. ಶಾಪ ವಿಮೋಚನೆಗೆ ಬೇಡಿದಾಗ ವಿಷ್ಣುವು ನೀವು ನನ್ನ ಸ್ನೇಹಿತರಾಗಿ ಬಂದು ಏಳು ಜನ್ಮವನ್ನು ಪಡೆದು ಶಾಪ ವಿಮೋಚನೆ ಮಾಡುತ್ತಿರೋ ಅಥವಾ ಮೂರು ಜನ್ಮಗಳಲ್ಲಿ ತನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೋಳ್ಳುತ್ತೀರೋ? ಎಂದು ಕೇಳಿದಾಗ ಅವರು ನಾವು ನಿನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ ಎಂದರು. ಅದರ ಫಲವೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಿನ ಜನನ.
ಹಿರಣ್ಯಕಶ್ಯಪುವಿಗೆ ಮದುವೆಯಾಗಿ ಪುತ್ರ ಸಂತತಿ ಪ್ರಾಪ್ತಿಯಾಗುತ್ತದೆ. ಆತನ ಹೆಸರೇ ಪ್ರಹ್ಲಾದ. ಇದೇ ಸಂದರ್ಭ ಆ ಮಗುವಿಗೆ ನಾರದರು ಗರ್ಭಾವಸ್ಥೆಯಲ್ಲಿ ಶ್ರೀಹರಿಯ ಮೇಲೆ ಭಕ್ತಿ ಮೂಡುವಂತೆ ಮಾಡುತ್ತಾರೆ. ಹಿರಣ್ಯ ಕಶ್ಯಪು ಹರಿಯನ್ನು ದ್ವೇಷಿಸುವ ಕಾರಣ ಪ್ರಹ್ಲಾದನಿಗೆ ಹರಿಯನ್ನು ಭಜಿಸದಂತೆ ಹೇಳುತ್ತಾನೆ. ಅದನ್ನು ಕೇಳದೇ ಪ್ರಹ್ಲಾದ ಶ್ರೀಹರಿಯನ್ನು ಭಜಿಸಿ ಪೂಜಿಸುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು ಪ್ರಹ್ಲಾದನಿಗೆ ಹಲವು ಕಿರುಕುಳವನ್ನು ಕೊಡುತ್ತಾನೆ. ಆಗ ಪ್ರಹ್ಲಾದ ವಿಷ್ಣುವಿನ ಅನುಗ್ರಹದಿಂದ ಕಷ್ಟಗಳಿಂದ ಪಾರಾಗುತ್ತಾನೆ.
ಕೊನೆಗೊಂದು ದಿನ ಪ್ರಹ್ಲಾದನ ಭಕ್ತಿಯನ್ನು ಪರೀಕ್ಷಿಸಲು ದುಷ್ಟನಾದ ಹಿರಣ್ಯಕಶ್ಯಪು ಮಗನನ್ನು ಕರೆದು ಹರಿಯನ್ನು ತೋರಿಸು ಎಂದು ಹೇಳದಾಗ ಅತ ಸರ್ವಾಂತರ್ಯಾಮಿ ಎಲ್ಲೆಲ್ಲೂ ಇದ್ದಾನೆ. ಆತ ಅರಮನೆಯಲ್ಲಿದ್ದ ಕಂಬಗಳಲ್ಲಿಯೂ ಇದ್ದಾನೆ ಎಂದು ಪ್ರತಿ ಕಂಬಗಳನ್ನು ತೋರಿಸಿ ಹೇಳುತ್ತಾನೆ. ಆಗ ಕುಪಿತಗೊಂಡ ಹಿರಣ್ಯಕಶ್ಯಪು ಕೊನೆಗೆ ಒಂದು ಕಂಬವನ್ನು ಗದಾಪ್ರಹಾರದಿಂದ ಒಡೆಯುತ್ತಾನೆ. ಆಗ ಕಂಬದಿಂದ ಉದ್ಭವಿಸಿದವನೇ ಶ್ರೀ ಉಗ್ರನರಸಿಂಹ. ಶ್ರೀ ಹರಿಯು ನರಸಿಂಹ ರೂಪಿಯಾಗಿ ಬರಲು ಕಾರಣವೊಂದಿದೆ. ಅದೇ ಹಿರಣ್ಯಕಶ್ಯಪುವಿಗೆ ಪ್ರಾಪ್ತವಾದ ಬ್ರಹ್ಮ ದೇವನ ವರ.
ಹಿರಣ್ಯಕಶ್ಯಪನು ತನ್ನನ್ನು ಮೇಲೆ ಅಥವಾ ಕೆಳಗೆ, ಮನುಷ್ಯನಿಂದ ಅಥವಾ ಪ್ರಾಣಿಯಿಂದ, ಅಸ್ತ್ರಗಳಿಂದ ಅಥವಾ ಅಯುಧಗಳಿಂದ ಒಳಗೂ ಅಲ್ಲ ಹೊರಗೂ ಅಲ್ಲದೇ, ಬೆಳಗ್ಗೆಯೂ ಅಲ್ಲ, ಸಂಜೆಯೂ ಅಲ್ಲದೇ ಸಾವು ಬರಬಾರದು ಎಂಬ ವರ ಪಡೆದಿದ್ದ. ಆದುದರಿಂದ ವಿಷ್ಣುವು ನರನೂ ಅಲ್ಲದ ಪ್ರಾಣಿಯೂ ಅಲ್ಲದ ನರಸಿಂಹ ಅವತಾರ ತಾಳಿ ಹಿರಣ್ಯಕಶ್ಯಪುವನ್ನು ಒಳಗೂ ಅಲ್ಲದೇ, ಹೊರಗೂ ಅಲ್ಲದೇ ಹೊಸ್ತಿಲ ಮೇಲೆ, ಮೇಲೂ ಅಲ್ಲ ಕೆಳಗೂ ಅಲ್ಲದಂತೆ ನರಸಿಂಹನು ತನ್ನ ತೊಡೆಯ ಮೇಲೆ ಇಟ್ಟು ಆತನ ಹೊಟ್ಟೆಯ ಮಧ್ಯದಲ್ಲಿ ಅಸ್ತ್ರಗಳಿಂದ ಅಥವಾ ಅಯುಧಗಳಿಂದಲ್ಲದೆ ತನ್ನ ನಖಗಳಿಂದ, ಬೆಳಗ್ಗೆಯೂ ಅಲ್ಲ ಸಂಜೆಯೂ ಅಲ್ಲದೇ ತ್ರಿಸಂಧ್ಯಾ ಕಾಲದಲ್ಲಿ ನರಸಿಂಹನ ರೂಪದಲ್ಲಿ ಬಂದು ಹಿರಣ್ಯಕಶ್ಯಪುವನ್ನು ಸಂಹರಿಸುತ್ತಾನೆ. ಅಂದು ವೈಶಾಖಮಾಸ ಚತುರ್ದಶಿ ಸ್ವಾತಿ ನಕ್ಷತ್ರ. ಸ್ವತಃ ನರಸಿಂಹ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಎಂದು ಪ್ರತೀತಿಯಿದೆ.
ಅದು ವೈಶಾಖದ ಶುಕ್ಲ ಚತುರ್ದಶಿ. ಪ್ರಹ್ಲಾದನ ಭಕ್ತಿಯ ಪರಾಕಾಷ್ಠೆಯನ್ನು ಜಗತ್ತಿಗೆ ತೋರಿಸಲೆಂದೇ ವಿಷ್ಣು ತಾನೇ ಮನುಷ್ಯ-ಮೃಗ ಸೇರಿ ನರಸಿಂಹನಾದ. ಹಗಲು ರಾತ್ರಿ ತೊರೆದು ಮುಸ್ಸಂಜೆಯ ವೇಳೆಗೆ, ಯಾವ ತಂದೆ ತಾಯಿಯೂ ಇಲ್ಲದ ಜನನ ಮರಣಗಳಿಲ್ಲದ ಭಗವಂತ ಕಂಬದಿಂದ ಉದ್ಭವಿಸಿದ. ಮನೆಯ ಒಳಹೊರಗೆ ಬಾರದೇ ಹೊಸ್ತಿಲಲ್ಲಿ ಕುಳಿತು ಯಾವ ಅಸ್ತ್ರ-ಶಸ್ತ್ರಗಳಿಲ್ಲದೇ ಕೈ ಉಗುರಿನಿಂದಲೇ ಆ ದಾನವನ ಸಂಹಾರಗೈದ. ಸತ್ಯಯುಗದಲ್ಲಿ ಭಯೋತ್ಪಾದನೆಯ ಕಾಲವನ್ನು ಅಂತ್ಯಗೊಳಿಸಿದ. ಆ ದಿನವನ್ನೇ “ನರಸಿಂಹ ಜಯಂತಿ” ಎಂದು ಇಂದಿಗೂ ಭಕ್ತರು ವೈಭವದಿಂದ ಆಚರಿಸುತ್ತ ಬಂದಿದ್ದಾರೆ. ಮನೆಯ ಹೊಸ್ತಿಲಲ್ಲಿ ನರಸಿಂಹ ದೇವರು ಸದಾ ನೆಲೆಸಿದ್ದಾರೆ ಎಂಬ ಪ್ರತೀತಿ ನಂಬಿಕೆ ಬೆಳೆದು ಬಂದಿದೆ.ಆದ್ದರಿಂದಲೇ ಇಂದಿಗೂ ಎಲ್ಲ ಸಂಪ್ರದಾಯದವರೂ ಬ್ರಾಹ್ಮೀ ಮುಹೂರ್ತದಲ್ಲಿ ಹೊಸ್ತಿಲನ್ನು ತೊಳೆದು ರಂಗವಲ್ಲಿ ಹಾಕಿ ಪೂಜೆ ಮಾಡುತ್ತಾರೆ.
ದೇಶದ ತುಂಬೆಲ್ಲ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ನರಸಿಂಹ ಸ್ವಾಮಿಯ ದೇಗುಲಗಳಿವೆ. ಅದರಲ್ಲೂ ಅತೀ ಪ್ರಾಚೀನ ಹಾಗೂ ಪುರಾಣಗಳಲ್ಲಿ ಉಲ್ಲೇಖಗೊಂಡ ಕೆಲವು ಕ್ಷೇತ್ರಗಳು ನಮ್ಮ ಕರ್ನಾಟಕದಲ್ಲಿವೆ. ಕೃಷ್ಣಾ ತೀರದಲ್ಲಿರುವ ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧವಾದ ಶೂರ್ಪಾಲಯ. ನೀರಾ ನಾರಸಿಂಹ, ತೊರವೆ ನಾರಸಿಂಹ, ಅಹೋಬಲ ನಾರಸಿಂಹ, ಕದಿರಿ ನರಸಿಂಹ, ಸಿಂಹಾಚಲ ವರಾಹಿ ನರಸಿಂಹ ಪ್ರನ್ನೊಬಲಂ ನರಸಿಂಹ, ಮುಕುಟಕಾನ ಹುಬ್ಬಳ್ಳಿಯ ನಾರಸಿಂಹ ಹೀಗೆ ಅನೇಕ ಕ್ಷೇತ್ರಗಳಲ್ಲಿ ವೈಭವದ ನರಸಿಂಹ ಜಯಂತಿ ಉತ್ಸವ ನಡೆಯುತ್ತದೆ. ಆಚರಣೆಯಲ್ಲಿಯೂ ವಿಶೇಷ ಕ್ರಮವಿದೆ. ಸಾಯಂಕಾಲದ ವರೆಗೂ ಉಪವಾಸದಿಂದಲೇ ಪೂಜೆ ಅಭಿಷೇಕ ಹೋಮ ಪಾರಾಯಣ ಎಲ್ಲವನ್ನೂ ನೆರವೇರಿಸುತ್ತಾರೆ. ಸಂಜೆ 6 ರಿಂದ 6.30 ವರೆಗೆ ಜಯಂತೀಕಾಲವೆಂದು ತಿಳಿಸಿದ್ದಾರೆ. ಎಲ್ಲ ನರಸಿಂಹ ಕ್ಷೇತ್ರಗಳಲ್ಲಿಯೂ ಆ ಸಮಯದಲ್ಲಿ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ನಂತರದಲ್ಲಿಯೇ ನರಸಿಂಹ ದೇವರ ನೈವೇದ್ಯ ಹಾಗೂ ಭಕ್ತಾದಿಗಳ ತೀರ್ಥ ಪ್ರಸಾದ ನಡೆಯುವುದು.
ಮನುಷ್ಯ ಮತ್ತು ಸಿಂಹ ಇವೆರಡರ ಸಂಮಿಲಿತಗೊಂಡ ವಿಷ್ಣುವಿನ ಅವತಾರವೇ ನರಸಿಂಹಾವತಾರ. ಮನುಷ್ಯ ಉನ್ನತಿಗೆ ಏರಿದಂತೆಲ್ಲಾ ತನ್ನ ಅಹಂ ಅನ್ನು ಬೆಳೆಸಿಕೊಳ್ಳುತ್ತಾ, ತಾನು ಪರಮಾತ್ಮನ ಸೃಷ್ಟಿಯ ಒಂದು ಭಾಗ ಎಂಬ ಅರಿವಿನ ಜಾಗೃತಿಯ ಪರಿವೆಯನ್ನು ಪ್ರಯತ್ನಪೂರ್ವಕವಾಗಿ ಮರೆಮಾಡಿಕೊಳ್ಳುತ್ತಾ, ತಾನೇ ಮಿಗಿಲು, ತನ್ನ ಸುತ್ತಲಿನ ಪ್ರಾಣಿ ಪ್ರಪಂಚ ಕೀಳು, ತನ್ನ ಹೆಂಡತಿ ಮಕ್ಕಳಿಗೇನು ಗೊತ್ತು, ನಾನು ಎಲ್ಲಾ ಸಂಪಾದಿಸುತ್ತಿದ್ದೇನೆ, ಇಡೀ ವಿಶ್ವವನ್ನೇ ಜಯಿಸುವಾಗ ಈ ವಿಶ್ವಕ್ಕೆ ಯಾವ ದೊಣ್ಣೆ ನಾಯಕ ಸೃಷ್ಟಿಕರ್ತ, ನಾನು ಏನು ಮಾಡಿದರೂ ನಡೆಯುತ್ತದೆ, ಎಲ್ಲರೂ ನನ್ನನ್ನೇ ಪ್ರಭುವೆಂದು ಕೊಂಡಾಡಬೇಕು – ಇಂತಹ ವಾಂಚಲ್ಯ, ದುರಭಿಮಾನ, ಅನ್ಯಮನಸ್ಕತೆ, ದುರಹಂಕಾರ ವೃದ್ಧಿಸುತ್ತಾ ಹೋಗುತ್ತದೆ. ಈ ರೀತಿಯಾಗಿ ತನ್ನ ಬದುಕೆಂಬ ಅನುಭವದ ಯಾತ್ರೆಯಲ್ಲಿ ಪುನೀತನಾಗುವ ಅವಕಾಶವನ್ನು ಕಳೆದುಕೊಳ್ಳುವ ಮಾನವ, ದಾನವನಾಗಿ ಪರಿವರ್ತಿತಗೊಂಡು ಭಯದ, ಲೋಭಧ, ಮೋಹದ, ಕ್ರೋಧದ ದಾನವತೆಯನ್ನು ಬಾಳುತ್ತಾ ಮುಂದೆ ಸಾಗುತ್ತಾನೆ.
ಹಿರಣ್ಯಾಕ್ಷ, ಹಿರಣ್ಯಕಶಿಪು ಅಂತಹ ರಾಕ್ಷಸರ ಬಾಳು ಇಂದಿನ ಬಹುತೇಕ ದಾಹಿಗಳ ಬದುಕಿನ ಒಂದು ನೆರಳಿನಂತೆ ಕಾಣುತ್ತದೆ. ಇಂತಹವರು ಇಂದು ಹೇರಳವಾಗಿ ಕಾಣುತ್ತಾರೆ, ಅಷ್ಟೇ ಅಲ್ಲ! ನಾವು ಸರಿಯಾಗಿದ್ದೇವೆ ಎಂದು ಹೇಳಿಕೊಳ್ಳುವ ನಮ್ಮ ಸ್ವಯಂ ಪ್ರತಿಷ್ಠೆಯಲ್ಲೂ ನಮ್ಮಲ್ಲಿ ನಾವೇ ಈ ಗುಣಗಳನ್ನು ಆಗಾಗ ಕಂಡುಕೊಳ್ಳುತ್ತಿರುತ್ತೇವೆ. ಬಹಳಷ್ಟು ವೇಳೆ ನಮ್ಮ ಪುಟ್ಟ ಮಕ್ಕಳು ತಮ್ಮ ಮುಗ್ಧತೆಯಲ್ಲಿ ತೋರುವ ದಿವ್ಯತೆಯನ್ನು ಸಹಾ ನಮಗೆ ಅನುಭಾವಿಸಲು ಸಾಧ್ಯವಾಗದೆ ನಮ್ಮ ಬಾಳನ್ನು ದುಸ್ತರವಾಗಿ ಬದುಕುತ್ತಿರುತ್ತೇವೆ.
ನಾವು ಸೂಕ್ಷ್ಮವಾಗಿ ನಮ್ಮ ಬದುಕನ್ನು ಅಧ್ಯಯಿಸಿಕೊಂಡು ಮಗುವಿನ ನಿರ್ಮಲ ಮನಸ್ಸಿನಿಂದ ಎಲ್ಲವೂ ನಿನ್ನದೇ, ನನ್ನದೇನಿದೆ ಎಂಬಂತಹ ಪ್ರೀತಿಯಾದ ಭಕ್ತಿಯನ್ನು ಅಳವಡಿಸಿಕೊಳ್ಳ ತೊಡಗಿದಾಗ ನಮ್ಮ ಮಾನವತನ ಮತ್ತು ಸಿಂಹತನದ ಅಗಾಧ ಶಕ್ತಿ ರಾಜ ಗಾಂಭೀರ್ಯಗಳು ನಮ್ಮ ಬಲವಾಗಿ, ಅದೇ ದೈವಶಕ್ತಿಯಾಗಿ ರೂಪುಗೊಂಡು ನಮ್ಮಲ್ಲಿರುವ ಎಲ್ಲ ರಾಕ್ಷಸ ಪ್ರವೃತ್ತಿಗಳೂ ಅಸುನೀಗುತ್ತವೆ. ಹೀಗಾಗಿ ಪ್ರಹ್ಲಾದನ ಮುಗ್ಧ ಪ್ರೀತಿ, ನರಸಿಂಹ ಎಂಬ ದಿವ್ಯತೆ ಮತ್ತು ಹಿರಣ್ಯಾಕ್ಷ – ಹಿರಣ್ಯಕಶಿಪುಗಳೆಂಬ ಅವಗುಣಗಳ ನಾಶದ ಕತೆಯನ್ನು ನಮ್ಮ ಕತೆಯನ್ನಾಗಿಯೇ ಕಂಡುಕೊಂಡು ನಮ್ಮ ಬದುಕನ್ನು ಉತ್ತಮತೆಯ ಕಡೆಗೆ ನಡೆಸಿಕೊಳ್ಳುವ ಸಾಧ್ಯತೆ ಇದೆ.
ನಮ್ಮೆಲ್ಲರ ಬದುಕು ಸುಗಮವಾಗಲಿ. ಈ ಜಗತ್ತಿನ ಹಿರಣ್ಯಾಕ್ಷ ಹಿರಣ್ಯಕಶಿಪುಗಳು ನಮ್ಮ ಪ್ರಾರ್ಥನೆಯಿಂದ ವಿನಾಶಗೊಂಡು ಈ ವಿಶ್ವವು ಸಜ್ಜನರ ವಿಶ್ವವಾಗಿ ಸುಂದರ ನಂದನವಾಗಿ ರೂಪುಗೊಳ್ಳಲಿ ಎಂದು ಶ್ರೀ ಲಕ್ಷ್ಮೀ ನರಸಿಂಹ ದೇವರಲ್ಲಿ ನಮ್ರವಾಗಿ ಪ್ರಾರ್ಥಿಸೋಣ.

ಸೌಮ್ಯ ಸನತ್








