ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರವನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‌ಪಿಜಿ ಸಿಲಿಂಡರ್ ಪೂರೈಕೆಯ ವ್ಯತ್ಯಯದಿಂದ ಜನರು ಈಗಾಗಲೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆ ಜನರ ಮೇಲೆ ಹೆಚ್ಚುವರಿ ಭಾರವಾಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಲವು ಬಾರಿ ತೈಲ ದರಗಳನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಕಾರ್ಮಿಕರು, ರೈತರು ಹಾಗೂ ಬಡವರ ಬದುಕು ಇನ್ನಷ್ಟು ಕಷ್ಟಕರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ದರ ಕಡಿಮೆ ಇತ್ತು. ರಾಜ್ಯ ಸರ್ಕಾರ ಸ್ವಲ್ಪ ಹೆಚ್ಚಳ ಮಾಡಿದಾಗ ಟೀಕಿಸಿದ್ದ ಬಿಜೆಪಿ, ಈಗ ಕೇಂದ್ರದ ದರ ಏರಿಕೆ ಬಗ್ಗೆ ಮೌನವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.ಇದನ್ನು ಓದಿ –ದರ್ಶನ್‌ಗೆ ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ
2014ಕ್ಕೂ ಮೊದಲು 413 ರೂಪಾಯಿ ಇದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಈಗ 1,000 ರೂಪಾಯಿ ದಾಟಿದೆ. ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗಿ ಜನಜೀವನ ಅಸ್ತವ್ಯಸ್ತವಾಗಲಿದೆ ಎಂದು ಹೇಳಿದರು.








