ಬೆಂಗಳೂರು: ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ನಡುವೆ ರಾಜಕೀಯ ವಲಯದಲ್ಲಿ ಅಡ್ಡಮತದಾನದ ಚರ್ಚೆ ಜೋರಾಗಿದೆ. ವಿಶೇಷವಾಗಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಎಂಟು ಅಭ್ಯರ್ಥಿಗಳು ಕಣದಲ್ಲಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಅಭ್ಯರ್ಥಿಗಳ ಗೆಲುವು ಬಹುತೇಕ ಖಚಿತವಾಗಿದ್ದು, ಐದನೇ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರಗಳು ತೀವ್ರ ಕುತೂಹಲ ಮೂಡಿಸಿವೆ.
ಈ ನಡುವೆ ಜೆಡಿಎಸ್‌ನ ಬಹುತೇಕ ಶಾಸಕರು ಪಕ್ಷದ ಸೂಚನೆಯಂತೆ ರೆಸಾರ್ಟ್‌ನಲ್ಲಿ ತಂಗಿದ್ದರೆ, ಜಿ.ಟಿ. ದೇವೇಗೌಡ ಮಾತ್ರ ಅದರಿಂದ ದೂರ ಉಳಿದಿದ್ದಾರೆ. ಅವರು ಒಂಟಿಯಾಗಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮತದಾನ ಪ್ರಕ್ರಿಯೆಯ ವೇಳೆ ಏಜೆಂಟ್‌ಗಳಿಗೆ ಖಾಲಿ ಮತಪೆಟ್ಟಿಗೆಯನ್ನು ತೋರಿಸಿದ ಬಳಿಕ ಜಿ.ಟಿ. ದೇವೇಗೌಡ ಮತ ಚಲಾಯಿಸಿದರು. ಅವರ ನಂತರ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಎಸ್.ಆರ್. ವಿಶ್ವನಾಥ್ ಸೇರಿದಂತೆ ಹಲವು ಸದಸ್ಯರು ಮತದಾನ ನಡೆಸಿದರು.
ಜೆಡಿಎಸ್ ವರಿಷ್ಠರೊಂದಿಗೆ ಅಸಮಾಧಾನ ಹೊಂದಿರುವ ಜಿ.ಟಿ. ದೇವೇಗೌಡ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಅಡ್ಡಮತದಾನ ಮಾಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಪಕ್ಷದ ವಿರುದ್ಧ ನಡೆದುಕೊಂಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.








