ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು ಅಧಿಕಾರ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ 14 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವು ಹಿರಿಯ ನಾಯಕರ ಹೆಸರುಗಳು ಕೇಳಿಬರುತ್ತಿವೆ.
ಪರಮೇಶ್ವರ್‌ಗೆ ಡಿಸಿಎಂ ಸ್ಥಾನ?
ಸಂಪುಟದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಗೆ ವರಿಷ್ಠರು ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಕಸರತ್ತು
ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಸತೀಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಹೆಸರು ಕೂಡ ಚರ್ಚೆಯಲ್ಲಿದ್ದು, ಅಂತಿಮ ತೀರ್ಮಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ಮುಂದುವರಿಸಿದೆ.
ಸಚಿವ ಸಂಪುಟದ ಅಧಿಕೃತ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.








