ಬೆಂಗಳೂರು: ಬಿಎಂಟಿಸಿಯ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ದೂರದ ಪ್ರದೇಶಗಳಿಗೆ ಸಂಚರಿಸುವ ಪ್ರಯಾಣಿಕರಿಗಾಗಿ ಹೊಸ ‘ವಿಸ್ತಾರ ಮಾಸಿಕ ಪಾಸ್’ ಜಾರಿಗೆ ತರಲಾಗಿದ್ದು, ಅದರ ದರವನ್ನು ₹1200ರಿಂದ ₹1500ಕ್ಕೆ ಹೆಚ್ಚಿಸಲಾಗಿದೆ.
ಪರಿಷ್ಕೃತ ದರ ಜೂನ್ ಇಂದಿನಿಂದ ಜಾರಿಗೆ ಬಂದಿದೆ.
ಆದರೆ, ಬೆಂಗಳೂರು ನಗರದ ವ್ಯಾಪ್ತಿಯೊಳಗೆ ಸಂಚರಿಸುವ ಸಾಮಾನ್ಯ ಮಾಸಿಕ ಬಸ್ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೆಯಂತೆ ₹1200 ದರವೇ ಮುಂದುವರಿಯಲಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.
ಬೆಂಗಳೂರು ಹೊರವಲಯದ ತಾಲೂಕು ಹಾಗೂ ಜಿಲ್ಲೆಗಳಾದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ಸೇರಿದಂತೆ ದೂರದ ಪ್ರದೇಶಗಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ‘ವಿಸ್ತಾರ ಮಾಸಿಕ ಪಾಸ್’ ಪರಿಚಯಿಸಲಾಗಿದೆ. ಈ ಪಾಸ್ ಹೊಂದಿರುವವರು ವಿಸ್ತರಿತ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ.
ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ರೆಡ್ಡಿ ಅವರ ಮಾಹಿತಿ ಪ್ರಕಾರ, ಈ ಹಿಂದೆ ಬಸ್‌ಗಳು ಬೆಂಗಳೂರು ನಗರದಿಂದ ಸುಮಾರು 40ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುತ್ತಿದ್ದವು. ಇದೀಗ ಸರ್ಕಾರದ ನಿರ್ದೇಶನದಂತೆ 65ರಿಂದ 70 ಕಿಲೋಮೀಟರ್ ದೂರದವರೆಗೂ ಸೇವೆ ವಿಸ್ತರಿಸಿರುವುದರಿಂದ ಹೊಸ ಪಾಸ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಇದೀಗ ಟಿಕೆಟ್ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಬೆನ್ನಲ್ಲೇ ವಿಸ್ತಾರ ಪಾಸ್ ದರ ಹೆಚ್ಚಳ ಮಾಡಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೆಚ್ಚುವರಿ ಆರ್ಥಿಕ ಹೊರೆ ಸಾರ್ವಜನಿಕರ ಮೇಲೆ ಬೀಳುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದರ ಜೊತೆಗೆ ಬಿಎಂಟಿಸಿಯ ವಜ್ರ (ಎಸಿ) ಬಸ್‌ಗಳ ಮಾಸಿಕ ಪಾಸ್ ದರವನ್ನೂ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ₹2000 ಇರುವ ಎಸಿ ಬಸ್ ಮಾಸಿಕ ಪಾಸ್ ದರವನ್ನು ₹2500ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಇದನ್ನು ಓದಿ –ಜೂನ್ 28ರವರೆಗೆ ರಾಜ್ಯದಲ್ಲಿ ಮಳೆ ಅಬ್ಬರ
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತಿರುವ ಸಂದರ್ಭದಲ್ಲಿ, ನಿಗಮದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಇತರ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ ಎಂದು ಕೆಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿಯ ಮುಂದಿನ ದರ ಪರಿಷ್ಕರಣೆ ಕುರಿತು ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.








