- ಡಿಎಂಕೆ ಮೈತ್ರಿಗೆ ತೆರೆ?
ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಡಿಎಂಕೆಯೊಂದಿಗಿನ ದೀರ್ಘಕಾಲದ ಮೈತ್ರಿಯನ್ನು ಕಡಿದುಕೊಂಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್, ಭಾರತದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕೋಮುಶಕ್ತಿಗಳನ್ನು ಈ ಮೈತ್ರಿಯಿಂದ ಹೊರಗಿಡುವ ಷರತ್ತಿನ ಮೇಲೆ ಮೈತ್ರಿ ಒಪ್ಪಂದ ನಡೆದಿದೆ ಎಂದು ತಿಳಿಸಿದರು. ಇದಕ್ಕೆ ಡಿಎಂಕೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ವಿನಂತಿಸಿದ್ದರು. ಕಾಂಗ್ರೆಸ್ ಜಾತ್ಯತೀತ, ಪ್ರಗತಿಪರ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ತಮಿಳುನಾಡಿನ ಜನರ ತೀರ್ಪನ್ನು ಗೌರವಿಸುವುದು, ಎತ್ತಿಹಿಡಿಯುವುದು ನಮ್ಮ ಸಾಂವಿಧಾನಿಕ ಕರ್ತವ್ಯವಾಗಿದೆ. ಕಾಂಗ್ರೆಸ್ ತಮಿಳುನಾಡು ಘಟಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷವು (ಸಿಎಲ್‌ಪಿ) ಸರ್ಕಾರ ರಚಿಸಲು ಟಿವಿಕೆಗೆ ಪೂರ್ಣ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಟಿವಿಕೆ ಮತ್ತು ಕಾಂಗ್ರೆಸ್ ನಡುವಿನ ಈ ಮೈತ್ರಿಯು ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಆದರ್ಶಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಲಿದೆ. ಮುಂದಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ಪೆರುಂತಲೈವರ್ ಕಾಮರಾಜರ್ ಅವರ ಸುವರ್ಣ ದಿನಗಳನ್ನು ಮರಳಿ ತರಲು ಶ್ರಮಿಸಲಿದೆ ಎಂದಿದೆ.
ಟಿವಿಕೆ ಕಚೇರಿಗೆ ಕೈ ಶಾಸಕರ ಭೇಟಿ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಚೆನ್ನೈನ ಪನೈಯೂರಿನಲ್ಲಿರುವ ಟಿವಿಕೆ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ನಟ-ರಾಜಕಾರಣಿ ವಿಜಯ್ ಅವರೊಂದಿಗಿನ ಉನ್ನತ ಮಟ್ಟದ ಸಭೆಗೆ ಕಾಂಗ್ರೆಸ್ ಶಾಸಕರ ನಿಯೋಗ ಆಗಮಿಸಿದೆ.
ಟಿವಿಕೆ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರಿಗೆ ನಿಯೋಜಿತ ಮುಖ್ಯಮಂತ್ರಿ ವಿಜಯ್ ಅವರು ಹೂಮಾಲೆ ಮತ್ತು ರೇಷ್ಮೆ ಶಾಲುಗಳನ್ನು ಹೊದಿಸಿ ಸ್ವಾಗತಿಸಿದರು. ತಮಿಳುನಾಡು ಕಾಂಗ್ರೆಸ್ ಪ್ರಭಾರಿ ಗಿರೀಶ್ ಚೋಡಂಕರ್ ಸಹಿ ಮಾಡಿದ ಪತ್ರದಲ್ಲಿ, ರಾಜ್ಯದ ಜನತೆ ವಿಜಯ್ ನೇತೃತ್ವದ ಟಿವಿಕೆಗೆ ಸ್ಪಷ್ಟ, ಬಲವಾದ ಮತ್ತು ಭಾರೀ ತೀರ್ಪು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.








