ಬೆಂಗಳೂರು: ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 6,000 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕಂಪನಿಯ ಉನ್ನತಾಧಿಕಾರಿಗಳ ಜೊತೆಗೆ ಬುಧವಾರ ನಡೆದ ವಿಸ್ತೃತ ಸಮಾಲೋಚನೆ ನಂತರ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಂಪನಿಯು ಹಂತ ಹಂತವಾಗಿ 6,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ಪ್ರತ್ಯಕ್ಷವಾಗಿ 20 ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಷಿಪಣಿ ತಯಾರಿಕೆಯ ಪೂರಕ ಸೌಲಭ್ಯ, ರೇಡಾರ್-ಸಂವೇದಕ, ಯುದ್ಧ ವಿಮಾನಗಳ ದುರಸ್ತಿ, ನಿರ್ವಹಣೆ ಸೌಲಭ್ಯ (ಎಂಆರ್‌ಒ) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಉದ್ದೇಶಿಸಿದೆ. ಮೊದಲ ಹಂತದಲ್ಲಿ 1,290 ಕೋಟಿ ರೂ., 2ನೇ ಹಂತದಲ್ಲಿ 2,898 ಕೋಟಿ ರೂ. ಮತ್ತು 3ನೇ ಹಂತದಲ್ಲಿ 1,512 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ ಎಂದು ಸಚಿವರು ವಿವರಿಸಿದರು.
200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ, ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆಕ್ಸಿಸ್‌ಕೇಡ್ಸ್ ಏರೊಸ್ಪೇಸ್‌ನ ಮುಖ್ಯ ಉದ್ದೇಶ. ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದು ಸಚಿವರು ಹೇಳಿದರು.
ಈ ಯೋಜನೆಗೆ ಕಂಪನಿಯು ದೇವನಹಳ್ಳಿ ಬಳಿ ಭೂಮಿ ಒದಗಿಸಲು ಮನವಿ ಮಾಡಿದೆ. 1.8 ಕಿ.ಮೀ ಉದ್ದದ ರನ್ ವೇ ನಿರ್ಮಾಣದ ಉದ್ದೇಶ ಕೂಡ ಇದೆ ಎಂದು ಕಂಪನಿ ಹೇಳಿದೆ. ಹಾಸನ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಬೇಕಾದರೂ ಪರಿಗಣಿಸಬಹುದು ಎಂದು ಸಲಹೆ ನೀಡಿದ್ದಾರೆ. ರನ್ ವೇ ನಿರ್ಮಾಣಕ್ಕೂ ಅನುಕೂಲ ಇರುವ ಕಡೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.








