- ಭಯೋತ್ಪಾದನೆಗೆ ಭಾರತ ತಲೆಬಾಗದು
ನವದೆಹಲಿ, ಏಪ್ರಿಲ್ 22: ಕಳೆದ ವರ್ಷ ಇದೇ ದಿನ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮರನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, “ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ ಬಲಿಯಾದ ಮುಗ್ಧ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದುಃಖದಲ್ಲಿರುವ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭಯೋತ್ಪಾದನೆಗೆ ಪೋಷಣೆ ನೀಡುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆ ನೀಡಿದ್ದು, “ಒಂದು ರಾಷ್ಟ್ರವಾಗಿ ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಂದಾಗಿದ್ದೇವೆ. ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ” ಎಂದು ಘೋಷಿಸಿದ್ದಾರೆ.
ಭಯೋತ್ಪಾದಕರ ಯಾವುದೇ ದುಷ್ಕೃತ್ಯಗಳು ಭಾರತದ ಏಕತೆ ಮತ್ತು ಶಾಂತಿಯನ್ನು ಕದಡಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಾಳಿಯ ನಂತರ ಕೈಗೊಂಡಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.
ಪ್ರಧಾನಿಯವರ ಈ ಹೇಳಿಕೆ ಭಾರತವು ಭದ್ರತಾ ವಿಷಯದಲ್ಲಿ ಅನುಸರಿಸುತ್ತಿರುವ ‘ಜೀರೋ ಟಾಲರೆನ್ಸ್’ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ದೇಶದ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ನೀಡಿದೆ.
ಪಹಲ್ಗಾಮ್ ದಾಳಿಯ ನೋವು ಇನ್ನೂ ಹಸಿಯಾಗಿದ್ದರೂ, ಭಾರತದ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಅಚಲವಾಗಿದೆ ಎಂದು ಅವರು ತಿಳಿಸಿದ್ದಾರೆ.








