- ಖಾತೆ ಹಂಚಿಕೆಗೆ ಅಸಮಾಧಾನ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ತಮಗೆ ಹಂಚಿಕೆ ಮಾಡಲಾದ ಜಲಸಂಪನ್ಮೂಲ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಕೋರಮಂಗಲದಲ್ಲಿರುವ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ತಮಗೆ ಈ ಹಿಂದೆ ನೀಡಿದ್ದ ಭರವಸೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಮಾತುಕೊಟ್ಟಿದ್ದರೂ, ಇದೀಗ ಜಲಸಂಪನ್ಮೂಲ ಖಾತೆ ನೀಡಿರುವುದು ನಿರಾಸೆ ತಂದಿದೆ ಎಂದು ಹೇಳಿದರು.
2023ರ ಸಂಪುಟ ರಚನೆ ಸಂದರ್ಭದಲ್ಲಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಹೇಳಲಾಗಿದ್ದರೂ, ಇದೀಗ ಅದನ್ನು ಪಾಲಿಸಿಲ್ಲ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಕೆಲವು ನಾಯಕರು ಮನವಿ ಮಾಡಿದರೂ, ತಮ್ಮ ತೀರ್ಮಾನ ಅಚಲವಾಗಿದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. “ನನ್ನ ನಿರ್ಧಾರ ಅಂತಿಮ. ಯಾರನ್ನೂ ಭೇಟಿಯಾಗುವ ಪ್ರಶ್ನೆಯಿಲ್ಲ” ಎಂದು ಹೇಳಿದರು.
ರಾಜಕೀಯ ಜೀವನದ ಹಲವು ದಶಕಗಳ ಅನುಭವವನ್ನು ಉಲ್ಲೇಖಿಸಿದ ಅವರು, ಪಕ್ಷಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದೇನೆ. ಆತ್ಮಗೌರವಕ್ಕೆ ಧಕ್ಕೆ ಬಂದಾಗ ಮೌನವಾಗಿರಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನು ಓದಿ –ಸಚಿವ ಸ್ಥಾನಾಕಾಂಕ್ಷಿಗಳು ಡಿಕೆಶಿ ಜೊತೆ ಹೋಗಿ: ಹರಿಪ್ರಸಾದ್
ರಾಮಲಿಂಗಾರೆಡ್ಡಿ ಅವರ ಈ ನಿರ್ಧಾರ ಹೊಸ ಸರ್ಕಾರಕ್ಕೆ ಆರಂಭದಲ್ಲೇ ರಾಜಕೀಯ ಸವಾಲಾಗಿ ಪರಿಣಮಿಸಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.








