ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಾಗೂ ಸಚಿವ ಸ್ಥಾನ ಬೇಕು ಎನ್ನುವವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಹೋಗಿ. ಪಕ್ಷ, ಹೋರಾಟ, ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜೊತೆ ಬನ್ನಿ. ಇದರಲ್ಲಿ ಯಾವುದೇ ಬಣವಿಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಲಹೆ ಮಾಡಿದರು.
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದ ಅವರು, ನಾನು ಹಿಂದುಳಿದ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದು ಮುಖ್ಯವಲ್ಲ. ನಾನು ಮುಂದುವರೆದವರಿಗಿAತ ಮುಂದುವರೆದವನು.
ನಾನು 2028ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಅನ್ನೋದು ವಾಟ್ಸಪ್ ಯುನಿವರ್ಸಿಟಿ ಅಪಪ್ರಚಾರ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಎಸ್‌ಐಆರ್, ಸಿಎಎ ವಿರುದ್ಧ ಹೋರಾಡುವ ಜವಾಬ್ದಾರಿ ಇದೆ. ಅಧಿಕಾರ ನನಗೆ ಮುಖ್ಯವಲ್ಲ, ನಾವು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಹೇಳಿದರು.
ಸಂವಿಧಾನವೇ ನಮ್ಮ ದಾರಿ, ಸಾಮಾಜಿಕ ನ್ಯಾಯವೇ ನಮ್ಮ ಗುರಿ, ಜಾತ್ಯತೀತತೆಯೇ ನಮ್ಮ ಶಕ್ತಿ ಎಂಬ ಕಾಂಗ್ರೆಸ್‌ನ ಮೂಲ ಸಂದೇಶವನ್ನು ಬಲಪಡಿಸುವ ಈ ನಿರ್ಧಾರದ ಜೊತೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಜಾತ್ಯಾತೀತ ಯುವ ಸಮುದಾಯ, ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷ, ಸಂಘಟನೆಗಳು ನನ್ನ ಜೊತೆ ಕೈ ಜೋಡಿಸುತ್ತದೆ ಎಂಬ ಭರವಸೆಯಲ್ಲಿ ಎಐಸಿಸಿ ನೀಡಿದ ಜವಾಬ್ದಾರಿಯನ್ನು ಒಪ್ಪಿ ನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ನಾನು ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ವರಿಷ್ಠರ ಬಳಿ ಹೋಗಿ ಯಾವತ್ತೂ ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ. ನಾನು ಅಧಿಕಾರಕ್ಕಾಗಿ ಪಕ್ಷದಲ್ಲಿ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಸಿಪಾಯಿ. ನಮ್ಮ ಹಿರಿಯರ ಆದರ್ಶ ಪಾಲಿಸಿಕೊಂಡು ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಹೇಳಿದರು.
ದೇಶದಲ್ಲಿ ದ್ವೇಷದ ರಾಜಕಾರಣ, ಧರ್ಮದ ಹೆಸರಿನ ಧ್ರುವೀಕರಣ ಮತ್ತು ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಹೊಸ ಜವಾಬ್ದಾರಿ, ಸವಾಲು ನೀಡಿದಂತಾಗಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿರುವ ನನಗೆ, ದೇಶದ ದುರಿತ ಕಾಲದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವ ಸಿಕ್ಕಿದೆ. ಈ ಸವಾಲು ಮತ್ತು ಜವಾಬ್ದಾರಿಯನ್ನು ಪಕ್ಷದ ಸೈದ್ದಾಂತಿಕ ಕಾರ್ಯಕರ್ತರ ಬಲದಿಂದ ಯಶಸ್ವಿಯಾಗಿ ಪೂರೈಸುತ್ತೇನೆ ಎಂಬ ಅಚಲ ನಂಬಿಕೆ ನನಗಿದೆ ಎಂದು ಬಿ.ಕೆ.ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನ ಕೇಂದ್ರ ನಾಯಕತ್ವದ ಈ ನಿರ್ಧಾರವು ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನವಾದ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಪರವಾಗಿ ನೀಡಿರುವ ಸ್ಪಷ್ಟ ಸಂದೇಶವಾಗಿದೆ’ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನರ ಆಶೋತ್ತರಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಈ ನಿಟ್ಟಿನಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬೂತ್ ಮಟ್ಟದಿಂದ ಸಂಘಟಿಸಿ, ಸೈದ್ಧಾಂತಿಕವಾಗಿ ಬಲಪಡಿಸೋಣ ಎಂದಿದ್ದಾರೆ.ಇದನ್ನು ಓದಿ –ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು; ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ
ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವವರು, ಕೋಮುವಾದದ ವಿರುದ್ಧ ಹೋರಾಡುವವರು, ಸಂವಿಧಾನವನ್ನು ರಕ್ಷಿಸುವ ಹೋರಾಟಗಾರರು ಮತ್ತು ಪ್ರಗತಿಪರ ಚಿಂತನೆ ಹೊಂದಿರುವ ಕೋಟ್ಯಾಂತರ ಕಾಂಗ್ರೆಸ್ಸೇತರ ಕಾರ್ಯಕರ್ತರೂ ನಮ್ಮ ದೇಶದ ಈ ದುರಿತ ಕಾಲದಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕಿದೆ. ಕಾಂಗ್ರೆಸ್ಸಿಗರಾದ ನಾವೂ ಕೂಡಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಜಾತ್ಯಾತೀತ ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಹೋಗಬೇಕಿದೆ ಎಂಬ ಅರಿವು ನನಗಿದೆ ಎಂದು ಹೇಳಿದ್ದಾರೆ.








