- ಜುಲೈ 1ರಿಂದ ದುಪ್ಪಟ್ಟು ದಂಡ ಜಾರಿ
ನವದೆಹಲಿ: ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಹಾಗೂ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜುಲೈ 1ರಿಂದ ಹೊಸ ದಂಡ ನಿಯಮಗಳನ್ನು ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ.
ಹೊಸ ನಿಯಮದ ಪ್ರಕಾರ, ಟಿಕೆಟ್ ಇಲ್ಲದೇ ಪ್ರಯಾಣಿಸುವವರು ಇನ್ನುಮುಂದೆ ಟಿಕೆಟ್ ದರದ ಜೊತೆಗೆ 500 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದುವರೆಗೆ ಈ ದಂಡದ ಮೊತ್ತ 250 ರೂ. ಆಗಿತ್ತು. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿರುವುದು ಗಮನಾರ್ಹ.
ಮಹಿಳಾ ಕೋಚ್‌ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂ.ವರೆಗೆ ದಂಡ ವಿಧಿಸುವ ಅವಕಾಶವಿದೆ. ರೈಲ್ವೆ ನಿಲ್ದಾಣ ಅಥವಾ ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೇ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವವರಿಗೆ 2,000 ರೂ. ದಂಡ ವಿಧಿಸಲಾಗುತ್ತದೆ.
ಇದಲ್ಲದೆ, ನಿಷೇಧಿತ ವಸ್ತುಗಳನ್ನು ಸಾಗಿಸುವವರಿಗೆ 10,000 ರೂ.ವರೆಗೆ ದಂಡ ವಿಧಿಸಬಹುದಾಗಿದೆ. ರೈಲು ಅಥವಾ ರೈಲ್ವೆ ನಿಲ್ದಾಣದ ಆವರಣಕ್ಕೆ ಅನಧಿಕೃತ ಪ್ರವೇಶ ಮಾಡಿದರೆ 500 ರೂ. ದಂಡ ಪಾವತಿಸಬೇಕಾಗುತ್ತದೆ.
ರೈಲಿನಲ್ಲಿ ಮದ್ಯಪಾನ ಮಾಡಿ ಗಲಾಟೆ ನಡೆಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ 24 ಗಂಟೆಗಳವರೆಗೆ ಜೈಲು ಶಿಕ್ಷೆ, 1,000 ರೂ. ದಂಡ ಅಥವಾ ಸಮುದಾಯ ಸೇವೆಯ ಶಿಕ್ಷೆ ವಿಧಿಸುವ ಅವಕಾಶವಿದೆ. ಸಹ ಪ್ರಯಾಣಿಕರಿಗೆ ಕಿರುಕುಳ ನೀಡುವುದು ಅಥವಾ ಅಶ್ಲೀಲ ವರ್ತನೆ ತೋರಿದರೆ 1,000 ರೂ. ದಂಡದ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು.
ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ವ್ಯವಸ್ಥೆಯ ಸುಗಮ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ದಂಡ ಪಾವತಿಸಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.








