ರಾಮನಗರ: ‘ವೃಕ್ಷಮಾತೆ’ ಎಂದೇ ಖ್ಯಾತಿಯ ಶತಾಯುಷಿ ಸಾಲುಮರದ ತಿಮ್ಮಕ್ಕ (114) ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.
ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರಾದ ತಿಮ್ಮಕ್ಕ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಪುತ್ರ, ಪರಿಸರವಾದಿ ಉಮೇಶ್ ಬಳ್ಳೂರಿನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕಳೆದ ಕೆಲವು ತಿಂಗಳಲ್ಲಿ ಅವರ ಆರೋಗ್ಯದಲ್ಲಿ ಆಗಾಗ ಬದಲಾವಣೆ ಕಂಡುಬರುತ್ತಿತ್ತು.
ಎರಡು ದಿನಗಳ ಹಿಂದೆ ಉಸಿರಾಟದ ತೀವ್ರ ತೊಂದರೆಯಿಂದ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.
ತಿಮ್ಮಕ್ಕ ಮತ್ತು ಅವರ ಪತಿ ಚಿಕ್ಕಯ್ಯ ದಂಪತಿಗೆ ಮಕ್ಕಳಿರಲಿಲ್ಲ. ಈ ನೋವು ಮರೆಸಿಕೊಳ್ಳಲು ತಿಮ್ಮಕ್ಕ ಅವರು ತಮ್ಮೂರಿನ ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ಅವುಗಳನ್ನು ಮಕ್ಕಳಂತೆ ಕಾಳಜಿ ವಹಿಸಿ ನೀರು ಹಾಕಿ, ಪ್ರಾಣಿಗಳಿಂದ ರಕ್ಷಿಸಿ ಬೆಳೆಸಿದರು. ಆ ಗಿಡಗಳೀಗ ಅರಣ್ಯವನ್ನೇ ಸ್ಮರಿಸುವಷ್ಟು ದೊಡ್ಡ ಮರಗಳಾಗಿ ಬೆಳೆದಿವೆ.ಇದನ್ನು ಓದಿ –ಎನ್‌ಡಿಎ 190ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ
ಪರಿಸರ ಸಂರಕ್ಷಣೆಗೆ ಮಾಡಿದ ಅವರ ಅಮೂಲ್ಯ ಸೇವೆಗೆ ಗೌರವವಾಗಿ 2019ರಲ್ಲಿ ಭಾರತ ಸರ್ಕಾರವು ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಇದೇ ಹೊರತು ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ಪಡೆದಿದ್ದರು.








