ಬೆಳಗಾವಿ: ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮ–ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಘೋಷಿಸಿದರು.
ಬಿಜೆಪಿ ಸದಸ್ಯರು ಧನಂಜಯ ಸರ್ಜಿ ಮತ್ತು ಹಣಮಂತ ನಿರಾಣಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಮಾಹಿತಿ ಹಂಚಿಕೊಂಡರು.
ಮುಖ್ಯಮಂತ್ರಿಗಳ ಪ್ರಕಾರ, ಪ್ರಸ್ತುತ ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಅದರಲ್ಲೂ 96,844 ಹುದ್ದೆಗಳನ್ನು ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಉಳಿದ 1.88 ಲಕ್ಷ ಖಾಲಿ ಹುದ್ದೆಗಳಲ್ಲೂ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ ಎಂದು ಹೇಳಿದರು.
ಇದೇ ರೀತಿ ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ 1,01,420 ಹುದ್ದೆಗಳು ಖಾಲಿ ಇರುವುದರ ಜೊತೆಗೆ, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಮುಂದುವರೆದು ಅವರು ಹೇಳಿದರು: “ಅನುಕಂಪದ ನೇಮಕಾತಿ, ಬಡ್ತಿ ಮೂಲಕ ಭರ್ತಿ ಮಾಡುವ ಹುದ್ದೆಗಳು ಹಾಗೂ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಇಲಾಖಾ ಹಂತದಲ್ಲೇ ಅನುಮತಿ ನೀಡಲಾಗಿದೆ. ಉಳಿದ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ.”
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ರಾಜ್ಯದ ಖಜಾನೆ ಮೇಲೆ ಭಾರ ಬೀರುವ ಯಾವುದೇ ಹೊಸ ಹುದ್ದೆ ಸೃಷ್ಟಿ ಅಥವಾ ಅಸ್ತಿತ್ವದಲ್ಲಿರುವ ಹುದ್ದೆಗಳ ರದ್ದುಪಡಿಸುವಿಕೆ, ಸಾರ್ವಜನಿಕ ಸೇವಾ ರಚನೆಯ ಬದಲಾವಣೆಗಾಗಿ ಆರ್ಥಿಕ ಇಲಾಖೆಯ ಪೂರ್ವಾನುಮತಿ ಕಡ್ಡಾಯ ಎಂದು ಹೇಳಿದರು.ಇದನ್ನು ಓದಿ –ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಯಲ್ಲಿ 2% ಉದ್ಯೋಗ ಮೀಸಲು: ಸಿಎಂ
“ವಿಭಾಗಗಳು ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಹುದ್ದೆಗಳನ್ನು ತುಂಬಿದರೆ, ಆ ಹುದ್ದೆಗಳ ವೇತನ–ಭತ್ಯೆಗಳಿಗೆ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಯಾವ ಹೊಸ ಹುದ್ದೆ ಅಥವಾ ಯೋಜನೆಯ ಬಗ್ಗೆ ಆದೇಶ ಹೊರಡಿಸುವ ಮೊದಲು ಆರ್ಥಿಕ ಇಲಾಖೆಯ ಸಹಮತಿ ಅನಿವಾರ್ಯ” ಎಂದು ಅವರು ಸ್ಪಷ್ಟಪಡಿಸಿದರು.








