- ಜಗತ್ತನ್ನೇ ಬೆಳಗುವ ಶಕ್ತಿಗೆ ಕೃತಜ್ಞತೆ ಸಲ್ಲಿಸೋಣ.
ಹಿಂದೂ ಧರ್ಮದಲ್ಲಿ ಕೋಟಿ ಕೋಟಿ ದೇವತೆಗಳು ಇದ್ದರೂ ನಮ್ಮ ಕಣ್ಣಿಗೆ ಕಾಣುವ ದೇವರೆಂದರೇ ಅದು ತಾಯಿಯನ್ನು ಬಿಟ್ಟರೇ ಸೂರ್ಯ ದೇವನೇ ಆಗಿದ್ದಾನೆ. ಸಕಲ ಜೀವಿಗಳ ಜೀವನಕ್ಕೆ ಸೂರ್ಯ ಅವಶ್ಯ. ಈತನನ್ನು ಪ್ರತಿದಿನವು ನಾವು ನೋಡಲೇಬೇಕು ಮತ್ತು ಪೂಜಿಸಲೇ ಬೇಕು. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುವ ದೇವ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುವ ಈತನ ಕಿರಣಗಳಿಗೆ ಜೀವರಾಶಿಯನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ. ಇದೇ ಕಾರಣಕ್ಕೆ ಸೂರ್ಯನ ಪೂಜೆಗೆ ವಿಶೇಷ ಮಾನ್ಯತೆ ಇದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನ ರಥ ಸಪ್ತಮಿ ಸೂರ್ಯದೇವನ ಜನ್ಮದಿನ. ಭಗವಾನ್ ಸೂರ್ಯ ನಮ್ಮ ಆತ್ಮವನ್ನು ಪ್ರತಿನಿಧಿಸುತ್ತಾನೆ. ಈ ದಿನ ಜಗತ್ತಿಗೆ ಬೆಳಕನ್ನು ನೀಡುವ ಪ್ರತ್ಯಕ್ಷ ದೈವ ಸೂರ್ಯನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲೂ ಸಕಾರಾತ್ಮಕ, ಸಂತೋಷದ, ಯಶಸ್ಸು ಮತ್ತು ಸಮೃದ್ಧಿಯ ಬೆಳಕು ಮೂಡುವುದು.
ಚಳಿಗಾಲದಲ್ಲಿ ಒಣಗಿದ ತರಗೆಲೆಯಂತೆ ಆದ ಶರೀರ ರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ಹೊಸ ಚೈತನ್ಯ ಪಡೆಯುತ್ತದೆ. ಈ ಕಾರಣದಿಂದ ಈ ದಿನ ಸೂರ್ಯನಿಗೆ ಮೈಯೊಡ್ಡಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಸೂರ್ಯನ ಆರಾಧನೆ ನಡೆಸಿದರೆ ಆರೋಗ್ಯ ಮತ್ತು ಖ್ಯಾತಿ ಸಿಗುತ್ತದೆ. ಸೂರ್ಯನ ಬೆಳಕು ಅನೇಕ ರೋಗಗಳನ್ನು ಗುಣಮುಖ ಮಾಡುವ ಶಕ್ತಿ ಹೊಂದಿದ್ದು, ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ರೋಗಗಳು ಮತ್ತು ನೋವುಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.
ನಮಗೆಲ್ಲರಿಗೂ ಯೋಗ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸೂರ್ಯ ನಮಸ್ಕಾರ. ಸೂರ್ಯ ನಮಸ್ಕಾರವು ಯೋಗಾಭ್ಯಾಸದ ಅವಿಭಾಜ್ಯ ಅಂಗವಾಗಿದೆ.ರಥ ಸಪ್ತಮಿ ದಿನದಂದು ಸೂರ್ಯ ನಮಸ್ಕಾರ ಮಾಡುವುದು ಅತ್ಯಂತ ಮಂಗಳಕರ, ಏಕೆಂದರೆ ಇದು ಸೂರ್ಯನಿಗೆ ಸಮರ್ಪಿತವಾದ ದಿನವಾಗಿದ್ದು, ಸೂರ್ಯ ನಮಸ್ಕಾರದ 12 ಭಂಗಿಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಕ್ತಿ, ಏಕಾಗ್ರತೆ ಹೆಚ್ಚಿಸಿ, ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಿಸುತ್ತದೆ, ಇದರಿಂದ ಸಕಲ ರೋಗಗಳ ನಿವಾರಣೆಯಾಗಿ ಸೂರ್ಯ ದೇವನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ದಿನದಂದು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡುವುದು ಸಂಪ್ರದಾಯವಾಗಿದೆ, ಇದರಿಂದ ದೇಹದ ಕೋಶಗಳು ಬಲಗೊಂಡು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರ ಸಂಸ್ಕೃತ ಪದವಾಗಿದ್ದು ಸೂರ್ಯ ಎಂದರೆ ಜಗತ್ತನ್ನೇ ಬೆಳಗುವ ಶಕ್ತಿ, ನಮಸ್ಕಾರ ಎಂದರೆ ಕೃತಜ್ಞತೆ, ಜಗತ್ತನ್ನೇ ಬೆಳಗುವ ಶಕ್ತಿಗೆ ಕೃತಜ್ಞತೆ ಸಲ್ಲಿಸುವುದೇ ಸೂರ್ಯ ನಮಸ್ಕಾರ. ಭೂಮಿಯ ಮೇಲೆ ಇರುವ ಎಲ್ಲಾ ಜೀವಿಗಳಿಗೂ ಜೀವನಕ್ಕೆ ಮೂಲ ಕಾರಣವಾಗಿರುವುದು ಸೂರ್ಯನ ಬೆಳಕು ಆದ್ದರಿಂದ ಈ ಸೂರ್ಯನಿಗೆ ವಂದಿಸುವ ಕ್ರಮವೇ ಸೂರ್ಯನಮಸ್ಕಾರ.
ಸೂರ್ಯನನ್ನು ಆರಾಧಿಸುವ ಕ್ರಮವು ಸೂರ್ಯ ನಮಸ್ಕಾರ ಅಭ್ಯಾಸವಾಗಿದೆ. ಸೂರ್ಯ ನಮಸ್ಕಾರ ಆಸನದ ಕ್ರಮಗಳ ಬಗ್ಗೆ ನೇರವಾಗಿ ಯಾವುದೇ ಗ್ರಂಥದಲ್ಲಿ ಉಲ್ಲೇಖವಾಗದೇ ಇದ್ದರೂ ಸಹ, ಇದು ಗುರು-ಶಿಷ್ಯ ಪರಂಪರೆಯ ಮೂಲಕ ಬೆಳೆದುಬಂದಿರುವ ಅತ್ಯಮೂಲ್ಯವಾದ ಒಂದು ಕ್ರಿಯಾತ್ಮಕ ಯೋಗ ಪದ್ಧತಿಯಾಗಿದೆ.
ಆಧ್ಯಾತ್ಮ ಸಾಧನೆಯ ಸುಲಭ ಮಾರ್ಗಗಳಲ್ಲಿ ಸೂರ್ಯ ನಮಸ್ಕಾರವು ಆಸನ, ಪ್ರಾಣಾಯಾಮ, ಮಂತ್ರ ಮತ್ತು ಧ್ಯಾನದ ಸಮೀಕರಣವನ್ನು ಒಳಗೊಂಡು ಸಂಪೂರ್ಣವಾದ ಯೋಗವೆನಿಸುತ್ತದೆ. ಇದರ ನಿತ್ಯ ಅಭ್ಯಾಸದಿಂದ ದೇಹದಲ್ಲಿನ ಸೌರಶಕ್ತಿಯನ್ನು ಸಮತೋಲನ ಗೊಳಿಸುತ್ತದೆ ಮತ್ತು ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ದೇಹದಲ್ಲಿರುವ ಎಲ್ಲ ಸಂಧುಗಳನ್ನು ಹಾಗೂ ಸ್ನಾಯುಗಳಿಗೂ ಪರಿಪೂರ್ಣ ವ್ಯಾಯಾಮ ನೀಡುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರ ಹೆಚ್ಚಿಸುತ್ತವೆ.
ಸೂರ್ಯನಮಸ್ಕಾರವನ್ನು ನಾನಾ ವಿಧಗಳಲ್ಲಿ ಅಭ್ಯಸಿಸುವ ಕ್ರಮಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಅಭ್ಯಸಿಸುವ ಕ್ರಮವನ್ನು ತಿಳಿದುಕೊಳ್ಳೋಣ.
ಸೂರ್ಯ ನಮಸ್ಕಾರವು ಹನ್ನೆರಡು ಹಂತದ ಅಭ್ಯಾಸವಾಗಿದ್ದು ಇದರಲ್ಲಿ 12 ಕ್ರಿಯೆಗಳು, 12 ಮಂತ್ರಗಳು ಮತ್ತು 8 ಆಸನಗಳು (4 ಆಸನಗಳು ಪುನರಾವರ್ತನೆಯಾಗಿವೆ ) ಒಳಗೊಂಡಿದೆ, ಕೆಲವು ಪದ್ದತಿಗಳಲ್ಲಿ 7 ಆಸನಗಳು (5 ಆಸನಗಳು ಪುನರಾವರ್ತನೆಯಾಗಿವೆ) ಒಳಗೊಂಡಿದೆ. ಅವುಗಳೆಂದರೆ .
ತಾಡಾಸನ,ನಮಸ್ಕಾರಾಸನ,ಹಸ್ತ ಉಟ್ಟಾನಾಸನ ,ಹಸ್ತಪಾದಾಸನ,ಅಶ್ವ ಸಂಚಾಲನಾಸನ ,ದಂಡಾಸನ
ಅಷ್ಟಾಂಗ ನಮಸ್ಕಾರ ,ಭುಜಂಗಾಸನ ,ಅಧೋಮುಖ ಶ್ವಾನಾಸನ, ಅಶ್ವ ಸಂಚಾಲನಾಸನ, ಹಸ್ತಪಾದಾಸನ ಮತ್ತು ನಮಸ್ಕಾರಾಸನ .
ಪ್ರತಿದಿನ ಮಾಡುವ ಸೂರ್ಯ ನಮಸ್ಕಾರದಿಂದಾಗುವ ಪ್ರಯೋಜನಗಳು.

- ಸೂರ್ಯ ನಮಸ್ಕಾರವನ್ನು ತ್ವರಿತ ಗತಿಯಲ್ಲಿ ಮಾಡಿದರೆ ತೂಕ ಇಳಿಸಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರ ಮಾಡುವಾಗ ಸ್ನಾಯುಗಳು ಹಿಗ್ಗುತ್ತವೆ ಮತ್ತು ಸಂಕುಚಿತಗೊಂಡು ದೇಹದ ನಮ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರವು ಜಠರಗರುಳಿನ ಪ್ರದೇಶಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕಾರಿ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರದ 12 ಆಸನಗಳನ್ನು ಮಾಡುವಾಗ ಆಳವಾದ ಉಸಿರಾಟವು ಮೆದುಳಿಗೆ ಆಮ್ಲಜನಕವು ಪೂರಕವಾಗಿ , ಇದು ಮನಸ್ಸಿನ ಆತಂಕ, ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿ ಶಾಂತ ಸ್ಥಿತಿಯನ್ನು ತರುತ್ತದೆ.
- ಸೂರ್ಯ ನಮಸ್ಕಾರದ ಪ್ರಯೋಜನಗಳು ಭೌತಿಕ ಪ್ರಯೋಜನಗಳನ್ನು ಮೀರಿ ವಿಸ್ತರಿಸುತ್ತವೆ, ಇದು ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರವು ಹೃದಯ ಸ್ನಾಯುಗಳನ್ನು ಉತ್ತೇಜಿಸುವ ಆಸನಗಳನ್ನು ಒಳಗೊಂಡಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಅನಿಯಮಿತ ಹೃದಯ ಬಡಿತಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಸೂರ್ಯ ನಮಸ್ಕಾರವನ್ನು ನಿಯಮಿತವಾಗಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಇದು ಹೃದಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಸಕ್ರಿಯ ಉಸಿರಾಟದ ಪ್ರಕ್ರಿಯೆಯಿಂದ ಶ್ವಾಸಕೋಶಗಳಲ್ಲಿ ಸಂಪೂರ್ಣವಾಗಿ ಗಾಳಿಯಾಡಿ ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳನ್ನು ತೆಗೆದುಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರ ಎನ್ನುವುದು ವಿವಿಧ ಯೋಗ ಆಸನಗಳ ಸಂಯೋಜನೆಯಾಗಿದ್ದು ಅದು ರಕ್ತ ಮತ್ತು ಆಮ್ಲಜನಕದ ಪರಿಚಲನೆಯನ್ನು ಹೆಚ್ಚಿಸಲು ಒಟ್ಟಿಗೆ ಕೆಲಸ ಮಾಡುತ್ತದೆ. ಇದು ವಯಸ್ಸಾದ ವಯಸ್ಸಿನಲ್ಲಿಯೂ ಸಹ ಕಾಂತಿಯುತ ತ್ವಚೆ ಮತ್ತು ಆರೋಗ್ಯಕರ ಕೂದಲಿಗೆ ಕಾರಣವಾಗುತ್ತದೆ. ರಕ್ತದ ಹರಿವನ್ನು ಉತ್ತೇಜಿಸುವ ಮೂಲಕ, ಸೂರ್ಯ ನಮಸ್ಕಾರವು ಸುಕ್ಕುಗಳನ್ನು ತಡೆಯುವ ಮೂಲಕ ಚರ್ಮವನ್ನು ಪುನರ್ಯೌವನಗೊಳಿಸುತ್ತದೆ .
- ಮಹಿಳೆಯರಿಗೆ, ಸೂರ್ಯ ನಮಸ್ಕಾರವು ಋತುಚಕ್ರವನ್ನು ನಿಯಂತ್ರಿಸಲು, ಋತುಚಕ್ರದ ನೋವನ್ನು ಕಡಿಮೆ ಮಾಡಲು ಮತ್ತು ಹಾರ್ಮೋನ್ ಅಸಮತೋಲನವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
- ಸೂರ್ಯ ನಮಸ್ಕಾರವು ವಾತ, ಪಿತ್ತ ಮತ್ತು ಕಫವನ್ನು ಆಂತರಿಕವಾಗಿ ಸಮತೋಲನ ಗೊಳಿಸಿ ಎಲ್ಲಾ ಪ್ರಕಾರದ ಒತ್ತಡಗಳನ್ನು ದೂರ ಮಾಡಿ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೂರ್ಯ ನಮಸ್ಕಾರ ಮಾಡಲು ಉತ್ತಮ ಸಮಯ
ಸೂರ್ಯ ನಮಸ್ಕಾರ ಮಾಡಲು ಉತ್ತಮ ಸಮಯವೆಂದರೆ ಮುಂಜಾನೆ, ಸೂರ್ಯೋದಯದ ಸಮಯ. ಏಕೆಂದರೆ ಈ ಆಚರಣೆಯು ಸಾಂಪ್ರದಾಯಿಕವಾಗಿ ಸೂರ್ಯನಿಗೆ ಗೌರವ ಸಲ್ಲಿಸುವ ಸಮಯ. ಪ್ರತಿದಿನ ಮುಂಜಾನೆ, ವಾತಾವರಣವು ಪ್ರಾಣ ಶಕ್ತಿಯಿಂದ ತುಂಬಿರುತ್ತದೆ, ಇದನ್ನು ಜೀವ ಶಕ್ತಿ ಎಂದೂ ಕರೆಯುತ್ತಾರೆ. ಜೊತೆಗೆ, UV (ನೇರಳಾತೀತ) ಕಿರಣಗಳು ಚರ್ಮ ಮತ್ತು ಮೂಳೆ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಂತೆಯೇ, ಸೂರ್ಯನ ಆರಂಭಿಕ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಅನ್ನು ಉತ್ಪಾದಿಸುತ್ತವೆ. ಬೆಳಿಗ್ಗೆ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡುವುದು ದೇಹ ಮತ್ತು ಮನಸ್ಸನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ, ದಿನಕ್ಕೆ ಉಲ್ಲಾಸಕರ ಆರಂಭವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಖಾಲಿ ಹೊಟ್ಟೆಯಲ್ಲಿ ಈ ಅಭ್ಯಾಸವನ್ನು ನಿರ್ವಹಿಸುವುದು ಉತ್ತಮ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸೂರ್ಯ ನಮಸ್ಕಾರವು ಸೂರ್ಯನಿಗೆ ನಮಸ್ಕರಿಸುವುದು ಮಾತ್ರವಲ್ಲದೆ ದೇಹ, ಮನಸ್ಸು ಮತ್ತು ಆತ್ಮದ ಯೋಗಕ್ಷೇಮಕ್ಕೂ ಒಂದು ಸಮಗ್ರ ಆಚರಣೆಯಾಗಿದೆ. ಸೂರ್ಯ ನಮಸ್ಕಾರ ಹಂತಗಳ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು ಪ್ರಾಚೀನ ಆಚರಣೆಗಳಲ್ಲಿ ಹುದುಗಿರುವ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಒತ್ತಡ ಮತ್ತು ಜಡ ಜೀವನಶೈಲಿಯು ರೂಢಿಯಾಗಿರುವ ಜಗತ್ತಿನಲ್ಲಿ, ಸೂರ್ಯ ನಮಸ್ಕಾರದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆರೋಗ್ಯ ಮತ್ತು ಚೈತನ್ಯವನ್ನು ಮರುಪಡೆಯಲು ಪರಿವರ್ತನೆಯ ಹೆಜ್ಜೆಯಾಗಿದೆ. ಮತ್ತೇಕೆ ತಡ ಚಾಪೆಯನ್ನು ಹಾಸಿ , ಉದಯಿಸುತ್ತಿರುವ ನಾಳಿನ ಸೂರ್ಯನನ್ನು ಎದುರುಗೊಳ್ಳುತ್ತಾ ಈ ಪ್ರಾಚೀನ ಮತ್ತು ಆಳವಾದ ಅಭ್ಯಾಸದ ಮೂಲಕ ಪುನರುಜ್ಜೀವನದ ಪ್ರಯಾಣವನ್ನು ಪ್ರಾರಂಭಿಸೋಣ.

ಸೌಮ್ಯ ಸನತ್








