- ಇಬ್ಬರು ಅಧಿಕಾರಿಗಳ ಮನೆ–ಕಚೇರಿಗಳಲ್ಲಿ ಏಕಕಾಲದಲ್ಲಿ ಶೋಧ
ಮೈಸೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದ ಮೇರೆಗೆ ಮೈಸೂರು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳನ್ನು ಸೇರಿ ಒಟ್ಟು ಏಳು ಕಡೆ ಶೋಧ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆಯ ಜೂನಿಯರ್ ಎಂಜಿನಿಯರ್ ಕೆ.ಆರ್. ಚಂದ್ರಶೇಖರ್ ಅವರಿಗೆ ಸೇರಿದ ಮೈಸೂರಿನ ವಿಜಯನಗರ, ಕೆ.ಜಿ. ಕೊಪ್ಪಲು ನಿವಾಸಗಳು ಹಾಗೂ ಟಿ.ನರಸೀಪುರ ಕಚೇರಿ ಸೇರಿ ನಾಲ್ಕು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.
ಶೋಧದ ವೇಳೆ ಚಂದ್ರಶೇಖರ್ ಅವರ ಬಳಿ ಸುಮಾರು 1,37,00,000 ರೂ. ಮೌಲ್ಯದ ಸ್ಥಿರ ಆಸ್ತಿ,55 ಲಕ್ಷ ರೂ. ಮೌಲ್ಯದ ಎರಡು ನಿವೇಶನಗಳು,82 ಲಕ್ಷ ರೂ. ಮೌಲ್ಯದ ಒಂದು ಮನೆ ಹಾಗೂ ಕೃಷಿ ಭೂಮಿ ಸೇರಿದಂತೆ ಒಟ್ಟು 2,75,10,300 ರೂ. ಮೌಲ್ಯದ ಚಲಿಸಬಲ್ಲ ಆಸ್ತಿ ಇರುವುದಾಗಿ ದಾಖಲೆಗಳು ಪತ್ತೆಯಾಗಿವೆ. ಇದಲ್ಲದೆ ಶೋಧದ ಸಂದರ್ಭದಲ್ಲಿ 62,00,400 ರೂ. ನಗದು,2,02,39,900 ರೂ. ಮೌಲ್ಯದ ಚಿನ್ನಾಭರಣ,10,70,000 ರೂ. ಮೌಲ್ಯದ ವಾಹನ ಸೇರಿ ಒಟ್ಟು 2,54,10,300 ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ, ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿಗೆ ಸಂಬಂಧಿಸಿದಂತೆ ಎರಡು ಮನೆ ಹಾಗೂ ಕಚೇರಿಯಲ್ಲಿ ಶೋಧ ನಡೆಸಲಾಗಿದೆ.

ಇವರ ಬಳಿ ಸುಮಾರು 2,34,10,000 ರೂ. ಮೌಲ್ಯದ ಸ್ಥಿರ ಆಸ್ತಿ, 1,03,10,000 ರೂ. ಮೌಲ್ಯದ ನಾಲ್ಕು ನಿವೇಶನಗಳು, 1,31,00,000 ರೂ. ಮೌಲ್ಯದ ಮನೆ ಸೇರಿದಂತೆ ಒಟ್ಟು 1,10,02,829 ರೂ. ಮೌಲ್ಯದ ಚರ ಆಸ್ತಿ ಇರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಶೋಧದ ವೇಳೆ 1,45,340 ರೂ. ನಗದು,75,46,800 ರೂ. ಮೌಲ್ಯದ ಆಭರಣ,19,55,000 ರೂ. ಮೌಲ್ಯದ ವಾಹನ ಹಾಗೂ ಇತರೆ 13,55,689 ರೂ. ಸೇರಿ ಒಟ್ಟು 2,41,77,849 ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ ಉದ್ದೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ಚಂದ್ರಶೇಖರ್ ಯಾರು?
ಕೆ.ಆರ್. ಚಂದ್ರಶೇಖರ್ ಅವರು ಮೊದಲಿಗೆ ಗುಲ್ಬರ್ಗದಲ್ಲಿ ಜೂನಿಯರ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು. ಬಳಿಕ ಪಾಂಡವಪುರ ತಾಲ್ಲೂಕು ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸಿದ್ದರು.
2021ರಲ್ಲಿ ಮಹಿಳೆಯೊಬ್ಬರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ಆರೋಪವೂ ಇವರ ಮೇಲಿದೆ. ಬಳಿಕ ಕೆ.ಆರ್.ನಗರ ಜೆಇ ಆಗಿ ವರ್ಗಾವಣೆಗೊಂಡ ಚಂದ್ರಶೇಖರ್, ನಂತರ ಮತ್ತೆ ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-6 ಹಾಗೂ ಟಿ.ನರಸೀಪುರ ತಾಲ್ಲೂಕಿನ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಮಗ ಹಾಗೂ ಸೊಸೆಯೂ ಸಹ ಜೂನಿಯರ್ ಎಂಜಿನಿಯರ್ ಆಗಿದ್ದು, ಸದ್ಯ ಲೋಕಾಯುಕ್ತ ಶೋಧಕ್ಕೆ ಒಳಗಾಗಿದ್ದಾರೆ.








