ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ನಮ್ಮ ನಿರೀಕ್ಷೆ ಇದೇ ಅವಧಿಯಲ್ಲಿ ಈಡೇರಲಿದೆ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಐದು ವರ್ಷ ನಮ್ಮ ತಂದೆಯವರೇ ಮುಖ್ಯಮಂತ್ರಿ. ಅದಕ್ಕೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಮ್ಮ ನಾಯಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ನನ್ನ ಮಾತಿಗೆ ನಾನು ಸದಾ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಯಾವಾಗ ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಚಾರದಲ್ಲಿ ಹಿಂದೆ ನಾನು ಎರಡು ದಿನಾಂಕಗಳನ್ನು ಹೇಳಿದ್ದೆ; ಅವುಗಳು ವಿಫಲವಾಗಿವೆ. ಆದರೆ ಮೂರನೇ ದಿನಾಂಕ ವಿಫಲವಾಗುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಆ ದಿನಾಂಕವನ್ನು ಪ್ರಕಟಿಸುತ್ತೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ಇದನ್ನು ಓದಿ –ತಿರುಪತಿ ಲಡ್ಡು ಕಲಬೆರಕೆ: ನಾಯ್ಡು ಗಂಭೀರ ಆರೋಪ
ಶಿವಕುಮಾರ್ ಅವರ ಹೋರಾಟ ಮತ್ತು ಶ್ರಮದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲೂ ಅವರ ನೇತೃತ್ವ ಅಗತ್ಯವಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ಇದೆ. ಈ ಬಗ್ಗೆ ಎಲ್ಲ ಶಾಸಕರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.








