ವಿರುಧ್‌ನಗರ (ತಮಿಳುನಾಡು): ಜಿಲ್ಲೆಯ ಕಟ್ಟನಾರಪಟ್ಟಿಯಲ್ಲಿ ಇರುವ ಪಟಾಕಿ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿ 22 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಸ್ಫೋಟದ ತೀವ್ರತೆಗೆ ಕಾರ್ಖಾನೆಯ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಸುಮಾರು 10 ಕಿಲೋಮೀಟರ್ ದೂರದವರೆಗೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಸಚಿವರಾದ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳನ್ನು ವೇಗಗೊಳಿಸಲು ಹಾಗೂ ಮೇಲ್ವಿಚಾರಣೆ ನಡೆಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಅಗತ್ಯವಿರುವ ಎಲ್ಲಾ ನೆರವು ನೀಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.ಇದನ್ನು ಓದಿ –ಕಾವೇರಿ ನದಿಯಲ್ಲಿ 6 ಮಂದಿ ನೀರುಪಾಲು
ಈ ದುರ್ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಧೈರ್ಯ ದೊರಕಲಿ ಹಾಗೂ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.








