ನವದೆಹಲಿ: ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಕುರಿತು ಚರ್ಚಿಸಿದರು.
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಐಸಿಸಿ ಅಧ್ಯಕ್ಷರನ್ನು ನಾನು ಭೇಟಿ ಮಾಡದೇ ಮತ್ತಾರು ಭೇಟಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಅವರು ಎಐಸಿಸಿ ಅಧ್ಯಕ್ಷರು, ನಾನು ಕೆಪಿಸಿಸಿ ಅಧ್ಯಕ್ಷ. ನಮ್ಮ ಪಕ್ಷದ ಅಧ್ಯಕ್ಷರನ್ನು ನಾನು ಭೇಟಿ ಮಾಡದೇ ಬೇರೆ ಯಾರು ಭೇಟಿ ಮಾಡುತ್ತಾರೆ ಎಂದು ಹೇಳಿದರು.
ಪಕ್ಷವು ನನಗೆ ಕೇರಳ, ಅಸ್ಸಾಂ ಹಾಗೂ ತಮಿಳುನಾಡು ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿತ್ತು. ಅಲ್ಲಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇನೆ. ರಾಹುಲ್ ಗಾಂಧಿ ಅವರ ಪ್ರಚಾರದಲ್ಲೂ ಭಾಗಿಯಾಗಿದ್ದೆ. ರಾಜ್ಯದಲ್ಲೂ ಉಪಚುನಾವಣೆ ನಡೆದಿದ್ದು, ಅಸ್ಸಾಂಗೆ ಮತ್ತೊಮ್ಮೆ ತೆರಳಬೇಕಿದೆ ಎಂದು ತಿಳಿಸಿದರು.
ಇನ್ನೂ ಕೇಂದ್ರ ಸಚಿವರ ಭೇಟಿ ಕುರಿತು ಮಾತನಾಡಿದ ಅವರು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಜಾಗಗಳ ಅಗತ್ಯವಿದೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದರು.
ಸ್ಕೈಡೆಕ್ ಯೋಜನೆಗೆ ಎಚ್‌ಎಎಲ್‌ನಿಂದ ಎದುರಾಗಿದ್ದ ಅಡ್ಡಿ, ಪ್ರೀಮಿಯಂ ಎಫ್‌ಎಆರ್ ಹಾಗೂ ಬೆಂಗಳೂರು ವ್ಯವಹಾರ ವಲಯ ಯೋಜನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.ಇದನ್ನು ಓದಿ –ಭಾವುಕತೆಗೆ ಬಲವಾಗಿ ನಿಲ್ಲುವ ಗಳಿಗೆಗಳು.
ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ನಗರಾಭಿವೃದ್ಧಿಗೆ ವಿಶೇಷ ನಿಧಿ ಮೀಸಲಿಟ್ಟಿದ್ದು, ರಾಜ್ಯದ ನಗರಗಳಿಗೆ ₹5 ಸಾವಿರ ಕೋಟಿ ಅನುದಾನ ಘೋಷಿಸಲಾಗಿದೆ. ರಾಜ್ಯದಿಂದ 1,082 ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದ್ದು, ₹1.25 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ವಿವರಿಸಿದರು.








