ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜನರ ವಿಶ್ವಾಸ ಗೆದ್ದು ಸರ್ಕಾರಕ್ಕೆ ಬೆಂಬಲ ನೀಡಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಪರಿಣಾಮ ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ ಎಂದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೊಂದಲಗಳಿದ್ದರೂ ಗೆಲುವು ಸಾಧ್ಯ ಎಂಬ ವಿಶ್ವಾಸವಿತ್ತು ಎಂದು ಹೇಳಿದರು. ಎಸ್‌ಡಿಪಿಐ ಪಕ್ಷದಿಂದ ಸ್ಪರ್ಧೆ ಇದ್ದ ಕಾರಣ ಅಲ್ಪಸಂಖ್ಯಾತ ಮತಗಳ ಮೇಲೆ ಪರಿಣಾಮ ಬಿದ್ದಿದೆ ಎಂದೂ ಅವರು ಹೇಳಿದರು.
ಪಂಚ ರಾಜ್ಯಗಳ ಫಲಿತಾಂಶಗಳು ಕರ್ನಾಟಕದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಸಂತೋಷ, ಕೆಲವರಿಗೆ ನಿರಾಸೆ ಆಗಬಹುದು. ‘ಡಬಲ್ ಎಂಜಿನ್’ ಸರ್ಕಾರ ಇದ್ದಾಗಲೂ ಅವರು ನಿರೀಕ್ಷಿತ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಕೇರಳದ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ನಮಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೇ ಜನರು ಬದಲಾವಣೆಯ ಸಂಕೇತ ನೀಡಿದ್ದರು. ಎಲ್‌ಡಿಎಫ್ ಹತ್ತು ವರ್ಷ ಆಡಳಿತ ನಡೆಸಿದ ಹಿನ್ನೆಲೆ ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.ಇದನ್ನು ಓದಿ –ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ
ಶೃಂಗೇರಿ ಮರು ಎಣಿಕೆ ವಿಚಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದ ಘಟನೆ ಎಂದರು. ಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂಬ ಅನುಮಾನವಿದ್ದು, ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಲಾಗುವುದು ಹಾಗೂ ಕಾನೂನು ಹೋರಾಟವೂ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.








