ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಇನ್ನೂ ದೀರ್ಘಕಾಲ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಅನಿಲ ಪೂರೈಕೆ ವ್ಯತ್ಯಯಗೊಂಡಿದೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆ ಕಂಡುಬಂದಿದೆ.
ಭಾರತವು ತೈಲ, ಅನಿಲ ಹಾಗೂ ರಸಗೊಬ್ಬರಗಳ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುವುದರಿಂದ ಈ ಬೆಳವಣಿಗೆಯ ಪರಿಣಾಮ ದೇಶದ ಆರ್ಥಿಕತೆಯ ಮೇಲೂ ಕಾಣಿಸಿಕೊಳ್ಳತೊಡಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಈ ಪರಿಸ್ಥಿತಿ ಇನ್ನೂ ಕೆಲವು ಕಾಲ ಮುಂದುವರಿದರೆ ಇಂಧನದ ಮೇಲಿನ ಹೆಚ್ಚುವರಿ ವೆಚ್ಚವನ್ನು ಸರ್ಕಾರ ಸಾರ್ವಜನಿಕರ ಮೇಲೆ ವರ್ಗಾಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆದಾಗ್ಯೂ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಆರಂಭವಾದ ಬಳಿಕವೂ ಕೇಂದ್ರ ಸರ್ಕಾರ ಇದುವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.
ಇದೇ ಸಂದರ್ಭದಲ್ಲಿ ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಇಂಧನ ಬಳಕೆ ಹಾಗೂ ಖಾದ್ಯ ತೈಲ ಬಳಕೆಯನ್ನು ಮಿತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಇದರ ನಡುವೆ ರೂಪಾಯಿ ಮೌಲ್ಯದಲ್ಲೂ ಕುಸಿತ ಕಂಡುಬಂದಿದ್ದು, ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 95ರ ಗಡಿಯ ಕೆಳಗೆ ಇಳಿದಿದೆ.








