ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಸದ್ಯ 81 ಅಡಿಗೆ ಇಳಿದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರೀ ಕುಸಿತ ಕಂಡುಬಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ 108 ಅಡಿ ನೀರು ಸಂಗ್ರಹವಾಗಿತ್ತು.
ಮಳೆಯ ಕೊರತೆಯಿಂದ ಜಲಾಶಯದ ನೀರಿನ ಸಂಗ್ರಹಣೆಯೂ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಸ್ತುತ ಕೇವಲ 11.399 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಲ್ಲಿ ಸುಮಾರು 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಕೇವಲ 6 ಟಿಎಂಸಿಗೆ ಸೀಮಿತವಾಗಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿರುವುದು ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಪೂರೈಕೆಗೆ ಆತಂಕ ಉಂಟುಮಾಡಿದೆ. ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಮೂಲಗಳಲ್ಲಿ ಕೆಆರ್‌ಎಸ್ ಕೂಡ ಒಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ.
ಇದರ ನಡುವೆ ಕಾವೇರಿ ನೀರು ಹಂಚಿಕೆ ನಿಯಮಾವಳಿಗಳ ಪ್ರಕಾರ ಜೂನ್ ತಿಂಗಳಲ್ಲಿ ಕರ್ನಾಟಕವು ತಮಿಳುನಾಡಿಗೆ 9.19 ಟಿಎಂಸಿ ನೀರನ್ನು ಹರಿಸಬೇಕಾಗಿದೆ. ಆದರೆ ಜಲಾಶಯದಲ್ಲಿರುವ ಬಳಕೆಗೆ ಯೋಗ್ಯ ನೀರಿನ ಪ್ರಮಾಣವೇ 6 ಟಿಎಂಸಿಗೆ ಇಳಿದಿರುವುದು ಹೊಸ ಚಿಂತೆಗೆ ಕಾರಣವಾಗಿದೆ.
ಮುಂಬರುವ ದಿನಗಳಲ್ಲಿ ಮುಂಗಾರು ಮಳೆ ಚುರುಕುಗೊಂಡು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಾರದಿದ್ದರೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಜಲ ಸಂಕಷ್ಟ ತೀವ್ರಗೊಳ್ಳುವ ಸಾಧ್ಯತೆ ಇದೆ.








