ನವದೆಹಲಿ: ನೀಟ್ ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಮರುಪರೀಕ್ಷೆ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ನಡೆಸಲು ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಅದರ ಭಾಗವಾಗಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಸ್ಕ್ರೀನ್‌ಶಾಟ್‌ಗಳ ಪ್ರಸಾರ ಹಾಗೂ ಪರೀಕ್ಷೆಯಲ್ಲಿ ಪ್ರವೇಶ ಖಾತರಿ ನೀಡುವ ನೆಪದಲ್ಲಿ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿರುವ ಆರೋಪಗಳು ಟೆಲಿಗ್ರಾಮ್ ವಿರುದ್ಧ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಅವಧಿಯಲ್ಲಿ ದುರುಪಯೋಗ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಸಂಬಂಧ ಎರಡು ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದೆ.
ಮೊದಲ ನಿರ್ದೇಶನದ ಪ್ರಕಾರ, ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷೆ ಹಾಗೂ ಅದರ ನಂತರದ ಪ್ರಮುಖ ಪ್ರಕ್ರಿಯೆಗಳು ನಡೆಯಲಿವೆ.
ಎರಡನೇ ನಿರ್ದೇಶನದಂತೆ, ಜೂನ್ 30ರವರೆಗೆ ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ಸಂಪಾದಿಸುವ (Edit) ಸೌಲಭ್ಯವನ್ನು ಟೆಲಿಗ್ರಾಮ್ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಹಳೆಯ ಸಂದೇಶಗಳಲ್ಲಿ ಬದಲಾವಣೆ ಮಾಡಿ ತಪ್ಪು ಮಾಹಿತಿ ಹರಡುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.
ಎನ್‌ಟಿಎ ಮಾಹಿತಿ ಪ್ರಕಾರ, ಹಲವು ತಿಂಗಳುಗಳಿಂದ ಟೆಲಿಗ್ರಾಮ್‌ನ ಕೆಲವು ಚಾನೆಲ್‌ಗಳ ಮೇಲೆ ನಿಗಾ ವಹಿಸಲಾಗುತ್ತಿತ್ತು. ಸಂಘಟಿತ ವಂಚನಾ ಜಾಲಗಳು ಹಾಗೂ ಸೈಬರ್ ಅಪರಾಧಿಗಳು ಈ ವೇದಿಕೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಮೋಸಗೊಳಿಸುತ್ತಿರುವುದು ಪತ್ತೆಯಾಗಿದೆ ಎಂದು ಸಂಸ್ಥೆ ಹೇಳಿದೆ.
“ಪೇಪರ್ ಲೀಕ್ಡ್ ನೀಟ್”, “ರೀ-ನೀಟ್ 2026”, “ಖಾಸಗಿ ಮಾಫಿಯಾ” ಮತ್ತು “ರೀ-ನೀಟ್ ಮಾಫಿಯಾ” ಮುಂತಾದ ಹೆಸರಿನ ಚಾನೆಲ್‌ಗಳು ಪ್ರಶ್ನೆಪತ್ರಿಕೆ ದೊರೆಯುತ್ತದೆ ಎಂದು ಜಾಹೀರಾತು ನೀಡಿ, ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಂದ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದವು ಎಂದು ಎನ್‌ಟಿಎ ಆರೋಪಿಸಿದೆ.ಇದನ್ನು ಓದಿ –ಅರ್ಹರಿಗಷ್ಟೇ ಗ್ಯಾರಂಟಿ ಸೌಲಭ್ಯ, ಯೋಜನೆಗಳು ನಿಲ್ಲುವುದಿಲ್ಲ : ಸಿಎಂ
ಆದರೆ, ಅಧಿಕೃತ ಮತ್ತು ಸುರಕ್ಷಿತ ಪರೀಕ್ಷಾ ವ್ಯವಸ್ಥೆಯ ಹೊರತಾಗಿ ಯಾವುದೇ ಪ್ರಶ್ನೆಪತ್ರಿಕೆ ಅಸ್ತಿತ್ವದಲ್ಲಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಇಂತಹ ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.








