ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಎಎಸ್‌ಡಿಡಿಒ (ಪತ್ತೆಯಾಗದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿತರು ಹಾಗೂ ಇತರೆ) ಎಂದು ವರ್ಗೀಕರಿಸಲಾದ 1.11 ಕೋಟಿ ಮತದಾರರ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ.
ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ 1.11 ಕೋಟಿ ಮತದಾರರು ಎಎಸ್‌ಡಿಡಿಒ ವಿಭಾಗಕ್ಕೆ ಸೇರಿದ್ದು, ಇದು ಒಟ್ಟು ಮತದಾರರ ಶೇ.20.03ರಷ್ಟಾಗಿದೆ. ಇದುವರೆಗೆ ಶೇ.96ರಷ್ಟು ಗಣತಿ ನಮೂನೆಗಳು ಚುನಾವಣಾ ಅಧಿಕಾರಿಗಳಿಗೆ ಹಿಂದಿರುಗಿದ್ದು, 22,977 ನಮೂನೆಗಳು ಮಾತ್ರ ಬಾಕಿ ಉಳಿದಿವೆ.
- ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಎಎಸ್‌ಡಿಡಿಒ (ಪತ್ತೆಯಾಗದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿತರು ಹಾಗೂ ಇತರೆ) ಎಂದು ವರ್ಗೀಕರಿಸಲಾದ 1.11 ಕೋಟಿ ಮತದಾರರ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ.
- ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವಿಧಾನ
- ಹೊಸ ಮತದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ
ಲಭ್ಯವಿರುವ ಮಾಹಿತಿಯಂತೆ 16.30 ಲಕ್ಷ ಮತದಾರರು ಮೃತಪಟ್ಟಿದ್ದಾರೆ, ಮತ್ತೊಂದು 16.30 ಲಕ್ಷ ಮತದಾರರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಜೊತೆಗೆ 66.64 ಲಕ್ಷ ಮತದಾರರು ಗಣತಿ ನಮೂನೆಯಲ್ಲಿ ನಮೂದಿಸಿದ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುವ ವೇಳೆ ಮತದಾರರು ಲಭ್ಯವಾಗದಿದ್ದರೆ ಅವರನ್ನು ‘ಪತ್ತೆಯಾಗದವರು’, ಮನೆ ಖಾಲಿ ಮಾಡಿದ್ದರೆ ‘ಸ್ಥಳಾಂತರಗೊಂಡವರು’, ಮೃತಪಟ್ಟಿದ್ದರೆ ‘ಮೃತರು’ ಎಂದು ವರ್ಗೀಕರಿಸಲಾಗುತ್ತಿದೆ ಎಂದು ವಿವರಿಸಿದರು.
ಇಂತಹ ಮತದಾರರ ಹೆಸರುಗಳು ಆಗಸ್ಟ್ 8ರಂದು ಪ್ರಕಟವಾಗಲಿರುವ ಎಸ್‌ಐಆರ್ ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಆದರೆ ಪತ್ತೆಯಾಗದವರು ಅಥವಾ ಸ್ಥಳಾಂತರಗೊಂಡವರು ಅರ್ಜಿ ನಮೂನೆ–6 ಸಲ್ಲಿಸುವ ಮೂಲಕ ಮತ್ತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯುವವರು ಈಗಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 16ರೊಳಗೆ ಸಲ್ಲಿಸಲಾದ ಅರ್ಜಿಗಳನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವಿಧಾನ
ಸಾರ್ವಜನಿಕರು ತಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದೆಯೇ ಎಂಬುದನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಜಾಲತಾಣದಲ್ಲಿ ಪರಿಶೀಲಿಸಬಹುದು. ಜಾಲತಾಣದಲ್ಲಿರುವ ‘ASDDO LIST’ ಲಿಂಕ್ ಮೂಲಕ ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಮತಗಟ್ಟೆವಾರು ಪಟ್ಟಿಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.
ಪಟ್ಟಿಯಲ್ಲಿ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಮತದಾರರ ಕ್ರಮ ಸಂಖ್ಯೆ, ಎಪಿಕ್ ಸಂಖ್ಯೆ, ಹೆಸರು, ಸಂಬಂಧಿಯ ಹೆಸರು, ವಯಸ್ಸು ಹಾಗೂ ಎಎಸ್‌ಡಿಡಿಒ ವರ್ಗೀಕರಣದ ಕಾರಣ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ. ಈ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವೂ ಇದೆ.
ಹೊಸ ಮತದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ
ಅಕ್ಟೋಬರ್ 1ರೊಳಗೆ 18 ವರ್ಷ ಪೂರೈಸುವ ಯುವಕರು ಹೊಸ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅರ್ಹರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅನ್ಬುಕುಮಾರ್ ತಿಳಿಸಿದರು.
ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 10 ಲಕ್ಷ ಅರ್ಜಿ ನಮೂನೆಗಳನ್ನು ಮುದ್ರಿಸಿ ವಿತರಿಸಲಾಗಿದೆ. ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ತಿದ್ದುಪಡಿಗೆ ಸಂಬಂಧಿಸಿ 12.09 ಲಕ್ಷ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿದ್ದು, ಅವುಗಳನ್ನು ಆಗಸ್ಟ್ 17ರ ನಂತರ ಪರಿಶೀಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.








