ಚಿತ್ರದುರ್ಗ: ಎದೆ ಉರಿಯುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದ ನಾಲ್ಕು ವರ್ಷದ ಬಾಲಕನೊಬ್ಬ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.
ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ (4) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಮನೆಯಲ್ಲಿದ್ದ ವೇಳೆ ವೈಷ್ಣವ್ ತನಗೆ ಎದೆ ಉರಿಯುತ್ತಿದೆ ಎಂದು ಪೋಷಕರಿಗೆ ಹೇಳಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಸಾವಿನ ಕಾರಣ ವೈದ್ಯಕೀಯ ಪರೀಕ್ಷೆಯ ಬಳಿಕ ತಿಳಿದುಬರಬೇಕಿದೆ.








