ಮಂಡ್ಯ: ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆ ವಿರೋಧಿಸಿ ಹಾಗೂ ರೈತರ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವಂತೆ ಒತ್ತಾಯಿಸಿ ಜೂನ್ 23ರಂದು ರಾಜ್ಯಾದ್ಯಂತ ಟೋಲ್ ಬೂತ್ಗಳ ಎದುರು ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದ್ದು, ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಬ್ಬು, ಹಣ್ಣು ಹಾಗೂ ತರಕಾರಿ ಸಾಗಿಸುವ ಕೃಷಿ ವಾಹನಗಳಿಗೆ ಟೋಲ್ ವಿಧಿಸುವುದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ಆದ್ದರಿಂದ ಕೃಷಿ ಉತ್ಪನ್ನ ಸಾಗಿಸುವ ವಾಹನಗಳಿಗೆ ತಕ್ಷಣ ಟೋಲ್ ವಿನಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಾಹನ ಖರೀದಿಸುವ ಸಂದರ್ಭದಲ್ಲೇ ಮಾಲೀಕರು ರಸ್ತೆ ತೆರಿಗೆ ಪಾವತಿಸುತ್ತಾರೆ. ಇದರ ಹೊರತಾಗಿಯೂ ಟೋಲ್ ವಸೂಲಿ ಮಾಡುವುದು ನ್ಯಾಯಸಮ್ಮತವಲ್ಲ. ಹೀಗಾಗಿ ರಾಜ್ಯದ ಎಲ್ಲ ಟೋಲ್ ಸಂಗ್ರಹ ಕೇಂದ್ರಗಳನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ಪಂಜಾಬ್ನಲ್ಲಿ ಜಾರಿಯಲ್ಲಿರುವ ಟೋಲ್ ಸುಂಕ ವಸೂಲಿ ಮಾದರಿಯನ್ನು ಕರ್ನಾಟಕದಲ್ಲೂ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಇದನ್ನು ಓದಿ –ಪರಿಷತ್ ಚುನಾವಣೆ : ಜಿ.ಟಿ. ದೇವೇಗೌಡ ಅಡ್ಡಮತದಾನ ಶಂಕೆ
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬಾಕಿ ಇರುವ ಕಬ್ಬಿನ ಹಣವನ್ನು ಕೂಡಲೇ ಪಾವತಿಸಬೇಕು ಎಂಬ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.








