ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಡದಿ ಭಾಗದ ನೂರಾರು ರೈತರು ತಮ್ಮನ್ನು ಭೇಟಿಯಾಗಿ, ಕೆಲವು ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.
ಭೂಮಿಗೆ ಸರ್ಕಾರದಿಂದ ಪರಿಹಾರ ಪಡೆಯಲು ಸಿದ್ಧವಿದ್ದು, ತಮ್ಮ ಜಮೀನುಗಳನ್ನು ನೀಡಲು ಒಪ್ಪಿರುವುದಾಗಿ ರೈತರು ತಿಳಿಸಿದ್ದಾರೆ. ಹೀಗಾಗಿ ಭೂಮಿ ನೀಡಲು ಸಿದ್ಧರಿರುವ ರೈತರ ಜಮೀನುಗಳನ್ನು ಪಡೆಯಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
“ಬಾಕಿ ಉಳಿದಿರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ. ಯಾರು ಜಮೀನು ನೀಡಲು ಸಿದ್ಧರಿರುತ್ತಾರೋ ಅವರ ಜಮೀನು ಪಡೆಯುತ್ತೇವೆ. ಜಮೀನು ನೀಡಲು ಸಿದ್ಧರಿಲ್ಲದವರ ಭೂಮಿಯನ್ನು ಪಡೆಯುವುದಿಲ್ಲ,” ಎಂದು ಅವರು ಹೇಳಿದರು.
ಜೆಡಿಎಸ್ ಪಾದಯಾತ್ರೆಗೆ ಡಿಕೆಶಿ ತಿರುಗೇಟು
ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪಾದಯಾತ್ರೆಯಲ್ಲಿ ಸುಮಾರು 160 ರೈತರು ಮಾತ್ರ ಭಾಗವಹಿಸಿದ್ದರು. ಉಳಿದವರು ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರಿನಿಂದ ಬಂದಿದ್ದರು ಎಂದು ಹೇಳಿದರು.
“ಅವರು ಪ್ರತಿದಿನ ಹೋರಾಟ ಮಾಡಲಿ. ಎಷ್ಟು ಬೇಕಾದರೂ ಪಾದಯಾತ್ರೆ ಮಾಡಲಿ. ಈ ಬಗ್ಗೆ ಪೊಲೀಸರಿಗೆ ನಾನು ಹೇಳಿದ್ದೇನೆ,” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯನ್ನೂ ಉಲ್ಲೇಖಿಸಿದ ಅವರು, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1,000 ಎಕರೆ ಭೂಮಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆದಿತ್ತು. ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು.ರಾಜ್ಯಕ್ಕೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು?
ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸಲಿ. ಸದನದಲ್ಲಿ ಈ ಕುರಿತು ಕೇಳಲಾಗುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.








