ಮಂಡ್ಯ: ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರೀ ಏರುಪೇರು ಆಗಲಿದೆ. ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಅನ್ನ-ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದು ಕೋಡಿಮಠ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.
ತಮ್ಮ ನಿಖರ ಭವಿಷ್ಯ ವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮದ್ದೂರಿನಲ್ಲಿ ಮಾತನಾಡಿದ ಶ್ರೀಗಳು, ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರೀ ಏರುಪೇರು ಉಂಟಾಗಲಿದೆ ಎಂದು ಎಚ್ಚರಿಸಿದರು. ಈ ಹವಾಮಾನ ಬದಲಾವಣೆಯು ದೇಶದ ಹಲವು ಭಾಗಗಳಲ್ಲಿ ಅನ್ನ ಮತ್ತು ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಸಲಿದೆ. ಅಪಮೃತ್ಯುಗಳ (ಅಕಾಲಿಕ ಮರಣ) ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಆದರೆ ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ದೈವಾರಾಧನೆಗಳು ಹೆಚ್ಚಿದ ಪರಿಣಾಮ ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿರಲಿದೆ. ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.ಇದನ್ನು ಓದಿ –ಮೈಸೂರು ಸ್ಯಾಂಡಲ್‌ಗೆ ₹507 ಕೋಟಿ ಲಾಭ
ಜಾಗತಿಕ ಮಟ್ಟದಲ್ಲಿಯೂ ಭಾರಿ ಅಪಾಯಗಳು ಸಂಭವಿಸುವ ಲಕ್ಷಣಗಳಿವೆ ಎಂದು ಹೇಳಿರುವ ಶ್ರೀಗಳು, 2026ರ ಸಾಲಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಜಗತ್ತಿನಾದ್ಯಂತ ಜಲಪ್ರಳಯ ಹಾಗೂ ಅಗ್ನಿ ಅವಘಡಗಳಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಆದರೆ ಅತೃಪ್ತ ಆತ್ಮಗಳಿಗೆ ಸರಿಯಾದ ಸಂಸ್ಕಾರ ನಡೆಯದ ಕಾರಣ ಅವು ಮನುಕುಲಕ್ಕೆ ಕಂಟಕವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.








