ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಮುಂದುವರಿದಿರುವ ಪರಿಣಾಮ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರ ಪರಿಣಾಮವಾಗಿ ಜಲಾಶಯದ ನೀರಿನ ಮಟ್ಟ 100.34 ಅಡಿಗೆ ಏರಿಕೆಯಾಗಿದ್ದು, ಈ ವರ್ಷದ ಮೊದಲ ಬಾರಿಗೆ ‘ಶತಕ’ ಬಾರಿಸಿದೆ.
ಕಳೆದ ಮೂರು ದಿನಗಳಲ್ಲೇ ಜಲಾಶಯದ ನೀರಿನ ಮಟ್ಟ ಸುಮಾರು 8 ಅಡಿಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಕೆಆರ್‌ಎಸ್‌ನಲ್ಲಿ 23.079 ಟಿಎಂಸಿ ನೀರು ಸಂಗ್ರಹವಾಗಿದ್ದು, ಕೊಡಗು ಸೇರಿದಂತೆ ಕಾವೇರಿ ನದಿ ಮೇಲ್ಭಾಗದ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಒಳಹರಿವು ಮತ್ತಷ್ಟು ಹೆಚ್ಚಾಗುತ್ತಿದೆ.
ಜಲಾಶಯದ ಇಂದಿನ ವಿವರಗಳು:
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 100.34 ಅಡಿ
- ಒಳಹರಿವು: 32,048 ಕ್ಯೂಸೆಕ್
- ಹೊರಹರಿವು: 1,821 ಕ್ಯೂಸೆಕ್
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಪ್ರಸ್ತುತ ಸಂಗ್ರಹ: 23.079 ಟಿಎಂಸಿ
ಪ್ರಸ್ತುತ ಜಲಾಶಯಕ್ಕೆ 32,048 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಹೊರಹರಿವು ಕೇವಲ 1,821 ಕ್ಯೂಸೆಕ್ ಮಾತ್ರ ಇರುವುದರಿಂದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ.
ಹವಾಮಾನ ಮುನ್ಸೂಚನೆಯಂತೆ ಮೇಲ್ಭಾಗದ ಪ್ರದೇಶಗಳಲ್ಲಿ ಮಳೆ ಇದೇ ರೀತಿಯಲ್ಲಿ ಮುಂದುವರಿದು, ಮುಂದಿನ 10ರಿಂದ 15 ದಿನಗಳವರೆಗೆ ಇದೇ ಪ್ರಮಾಣದ ಒಳಹರಿವು ಮುಂದುವರಿದರೆ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ.
ಜಲಾಶಯ ಭರ್ತಿಯತ್ತ ಸಾಗುತ್ತಿರುವುದು ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನೀರಾವರಿ ವ್ಯಾಪ್ತಿಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ನೀರಿನ ಕೊರತೆಯಿಂದ ಉಂಟಾಗಿದ್ದ ಆತಂಕವೂ ಕಡಿಮೆಯಾಗುತ್ತಿದೆ.








