ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ಹಲವು ಬಾರಿ ಮದ್ಯದ ಬೆಲೆ ಏರಿಕೆಯಾಗಿದ್ದು, ಇದೀಗ ಐದನೇ ಬಾರಿಗೆ ಅಬಕಾರಿ ಸುಂಕ ಪರಿಷ್ಕರಣೆ ನಡೆಯಲಿದೆ.
ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ. ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ.
ಈ ಹೊಸ ಕ್ರಮದಿಂದ ಕಡಿಮೆ ಆಲ್ಕೋಹಾಲ್ ಹೊಂದಿರುವ ಕೆಲವು ಪ್ರೀಮಿಯಂ ಮದ್ಯಗಳ ದರ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದ್ದರೂ, ಸಾಮಾನ್ಯವಾಗಿ ಬಳಕೆಯಲ್ಲಿರುವ ಮದ್ಯಗಳ ದರ ಶೇಕಡಾ 20ರವರೆಗೆ ಏರಿಕೆಯಾಗಬಹುದು ಎನ್ನಲಾಗಿದೆ.
ರಾಜ್ಯದ ಅಬಕಾರಿ ಆದಾಯದಲ್ಲಿ ಪ್ರಮುಖ ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಹೆಚ್ಚಳವಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಹಾಗೂ ಜಿನ್‌ಗಳ ಕ್ವಾರ್ಟರ್ ಬಾಟಲ್‌ಗೆ ₹15ರಿಂದ ₹25ರವರೆಗೆ ಏರಿಕೆ ಸಾಧ್ಯತೆ ಇದೆ.
ಸಂಭಾವ್ಯ ದರ ಏರಿಕೆ ಹೀಗಿದೆ:
ಸ್ಲ್ಯಾಬ್-1: ₹80ರಿಂದ ₹95ಕ್ಕೆ
ಸ್ಲ್ಯಾಬ್-2: ₹95ರಿಂದ ₹110ಕ್ಕೆ
ಸ್ಲ್ಯಾಬ್-3: ₹120ರಿಂದ ₹135ಕ್ಕೆ
ಸ್ಲ್ಯಾಬ್-4: ₹150ರಿಂದ ₹170ಕ್ಕೆ
ಫುಲ್ ಬಾಟಲ್ ಮದ್ಯದ ಮೇಲೆ ₹50ರಿಂದ ₹100ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಬಹುದು.ಇದನ್ನು ಓದಿ –ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
ಮೂರು ವರ್ಷಗಳಲ್ಲಿ ಐದನೇ ಬಾರಿ ದರ ಏರಿಕೆ ಮಾಡಲಾಗುತ್ತಿದೆ ಎಂದು ಗ್ರಾಹಕರು ಹಾಗೂ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ಯೋಜನೆಗಳಿಗೆ ಹಣ ಸಂಗ್ರಹಿಸಲು ಮದ್ಯಪ್ರಿಯರ ಮೇಲೆಯೇ ಮತ್ತೆ ಹೊರೆ ಹಾಕುತ್ತಿದೆ ಎಂದು ಟೀಕಿಸಿದ್ದಾರೆ.








